ಮೈಸೂರು: ಹತ್ತು ದಿನಗಳ ವಿಶ್ವ ವಿಖ್ಯಾತ ದಸರಾ ಅಚರಣೆಗೆ ಅರಮನೆ ನಗರಿ ಮೈಸೂರು ಸಜ್ಜಾಗಿದೆ. ಪಾರಂಪರಿಕ ದಸರಾ ಅಥವಾ ನವರಾತ್ರಿ ಆಚರಣೆಗೆ ವಿದ್ಯುತ್ ದೀಪಾಲಂಕಾರಗಳಿಂದ ನವ ವಧುವಿನಂತೆ ಅಲಂಕೃತಗೊಂಡಿರುವ ಮೈಸೂರು, ಹಲವಾರು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆತಿಥ್ಯ ವಹಿಸುತ್ತದೆ.
'ನಾಡ ಹಬ್ಬ' ಕರ್ನಾಟಕದ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಬಿಂಬಿಸುವ ಭವ್ಯವಾದ ಆಚರಣೆಯಾಗಿದ್ದು, ರಾಜಮನೆತನದ ವೈಭವವನ್ನು ನೆನಪಿಸುತ್ತದೆ. ರಾಜ್ಯದ ಅತಿದೊಡ್ಡ ಮತ್ತು ಪ್ರಮುಖ ಹಬ್ಬಗಳಲ್ಲಿ ಒಂದೆಂದು ಪರಿಗಣಿಸಲಾದ ದಸರಾ, ಅಂದಿನ ಮೈಸೂರು ರಾಜವಂಶದ ಅರಸರ ನೇತೃತ್ವದಲ್ಲಿ ಜನಸಾಮಾನ್ಯರ ಹಬ್ಬವಾಗಿ ಬೆಳೆಯಿತು.
ಸಂಪ್ರದಾಯಗಳೊಂದಿಗೆ ಮುಂದುವರಿಯುತ್ತಾ, ದೇಶ ಸ್ವಾತಂತ್ರ್ಯ ಮತ್ತು ಗಣರಾಜ್ಯವಾದ ನಂತರ ಇದನ್ನು ಕರ್ನಾಟಕ ಸರ್ಕಾರದ ಆಶ್ರಯದಲ್ಲಿ ಆಚರಿಸಲಾಗುತ್ತಿದೆ.
ಅಕ್ಟೋಬರ್ 3 ರಂದು ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಬೆಳಗ್ಗೆ 9-15 ರಿಂದ 9-45ರ ನಡುವೆ ವೃಶ್ಚಿಕ ಲಗ್ನದಲ್ಲಿ ಸಾಹಿತಿ ಹಂ.ಪ. ನಾಗರಾಜಯ್ಯ ಅವರು ನಾಡ ದೇವತೆ ಚಾಮುಂಡೇಶ್ವರಿ ದೇವತೆಗೆ ಪುಷ್ಪಾರ್ಚನೆ ಮೂಲಕ ದಸರಾ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಅನೇಕ ಸಚಿವರು, ಹಿರಿಯ ಅಧಿಕಾರಿಗಳು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರುವರು.
10 ದಿನಗಳ ದಸರಾ ಮಹೋತ್ಸವದಲ್ಲಿ ಪ್ರತಿ ವರ್ಷದಂತೆ ಜಾನಪದ ಕಲಾ ಪ್ರಕಾರಗಳೊಂದಿಗೆ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಪ್ರದರ್ಶಿಸಲಾಗುತ್ತದೆ. ಇದು ಹೆಚ್ಚಿನ ಜನರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ದಸರಾ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು. ನವರಾತ್ರಿಯ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಈ ಸಮಯದಲ್ಲಿ ಮೈಸೂರಿನ ಅರಮನೆ, ಪ್ರಮುಖ ಬೀದಿಗಳು, ವೃತ್ತಗಳು ಮತ್ತು ಕಟ್ಟಡಗಳನ್ನು "ದೀಪಾಲಂಕಾರ" ಮಾಡಲಾಗಿದೆ. ರಾಜ್ಯದಾದ್ಯಂತ 508 ತಂಡಗಳ ಕಲಾವಿದರು ಸೇರಿದಂತೆ ಸುಮಾರು 6,500 ಕಲಾವಿದರು ಈ ಬಾರಿಯ ದಸರಾದಲ್ಲಿ ಸುಮಾರು 11 ವಿವಿಧ ವೇದಿಕೆಗಳಲ್ಲಿ ಪ್ರದರ್ಶನ ನೀಡಲಿದ್ದಾರೆ.
ಅಲ್ಲದೆ ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು, ರೈತರ ದಸರಾ, ಮಹಿಳಾ ದಸರಾ, ಯುವ ದಸರಾ, ಮಕ್ಕಳ ದಸರಾ ಮತ್ತು ಕವಿಗೋಷ್ಠಿಯನ್ನು ಸಹ ನಡೆಸಲಾಗುತ್ತದೆ. ದೀಪಾಲಂಕೃತ ಅಂಬಾವಿಲಾಸ ಅರಮನೆಯ ಮುಂಭಾಗದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಖ್ಯಾತ ಕಲಾವಿದರ ಪ್ರದರ್ಶನಕ್ಕೆ ಇದು ಪ್ರಮುಖ ವೇದಿಕೆಯಾಗಲಿದೆ. ಇಲ್ಲಿಯೇ ಮುಖ್ಯಮಂತ್ರಿಗಳು ಪ್ರತಿಷ್ಠಿತ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಸಿದ್ಧ ದಸರಾ ಜಂಬೂ ಸವಾರಿ ಮೆರವಣಿಗೆ, ಪಂಜಿನ ಕವಾಯತು ಪ್ರದರ್ಶನಕ್ಕೆ ಹೆಚ್ಚಿನ ಜನರು ಆಗಮಿಸುತ್ತಾರೆ. ಆದರೆ, ಜಿಲ್ಲಾಡಳಿತದ ಪ್ರಕಾರ ಈ ವರ್ಷ ವೈಮಾನಿಕ ಪ್ರದರ್ಶನ ಇರುವುದಿಲ್ಲ. ನವರಾತ್ರಿ ಸಂದರ್ಭದಲ್ಲಿ ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮನೆಗಳಲ್ಲಿ ಗೊಂಬೆ ಅಲಂಕಾರ ಸೇರಿದಂತೆ ವಿವಿಧ ಆಚರಣೆ ಮಾಡಲಾಗುತ್ತದೆ. ಅರಮನೆಯಲ್ಲಿ ರಾಜಮನೆತನದವರು ತಮ್ಮ ಸಂಪ್ರದಾಯದಂತೆ ಹಬ್ಬಗಳನ್ನು ಆಚರಿಸುತ್ತಾರೆ.
ಮೈಸೂರು ರಾಜಮನೆತನದ ವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವೈದಿಕ ಸ್ತೋತ್ರಗಳ ಪಠಣಗಳ ನಡುವೆ ರತ್ನ ಖಚಿತ ಸಿಂಹಾಸನವನ್ನು ಏರುವ ಮೂಲಕ ಖಾಸಗಿ ದರ್ಬಾರ್ (ಖಾಸಗಿ ದರ್ಬಾರ್) ನಡೆಸುತ್ತಾರೆ. ವಜ್ರಮುಷ್ಟಿ ಕಾಳಗ ಅರಮನೆಯಲ್ಲಿ ಆಚರಣೆಯ ಭಾಗವಾಗಿದೆ.
ನವರಾತ್ರಿಯ 10 ನೇ ದಿನವಾದ ವಿಜಯದಶಮಿಯಂದು ವಿಶ್ವವಿಖ್ಯಾತ ಜಂಬೂ ಸವಾರಿ ಪ್ರಮುಖ ಆಕರ್ಷಣೆ. ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಹೊತ್ತು ಅಭಿಮನ್ಯು ಆನೆ ಬನ್ನಿಮಂಟಪದತ್ತ ಸಾಗಲಿದೆ. ಅಭಿಮನ್ಯುವಿಗೆ ಇತರ ಆನೆಗಳು ಸಾಥ್ ನೀಡಲಿವೆ. ಅಕ್ಟೋಬರ್ 12 ರಂದು ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಪ್ರದರ್ಶನದೊಂದಿಗೆ ಮೈಸೂರು ದಸರಾ 2024ಕ್ಕೆ ವಿದ್ಯುಕ್ತ ತೆರೆ ಬೀಳಲಿದೆ. 10 ದಿನಗಳ ದಸರಾ ಆಚರಣೆ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದ್ದು, ಸಿಸಿಟಿವಿ ಕ್ಯಾಮರಾಗಳ ಮೂಲಕ ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ.