ಕಾಸರಗೊಡು: ನೀಲೇಶ್ವರ ತೆರು ಅಞೂಟ್ಟಂಬಲ ವೀರರ್‍ಕ್ಕಾವು ಶ್ರೀ ಮೂವಾಳಂಕುಯಿ ಚಾಮುಂಡಿ ಕ್ಷೇತ್ರ ಕಳಿಯಾಟ ಮಹೋತ್ಸವದ ಸಂದರ್ಭ ಸುಡುಮದ್ದು ದಾಸ್ತಾನು ಕೇಂದ್ರಕ್ಕೆ ಬೆಂಕಿತಗುಲಿದ ಪರಿಣಾಮ ಉಂಟಾಗಿರುವ ಅಗ್ನಿ ಅನಾಹುತದಲ್ಲಿ ಗಾಯಾಳುಗಳ ಸಂಖ್ಯೆ 157ಕ್ಕೇರಿದೆ. ಇವರಲ್ಲಿ ಎಂಟು ಮಂದಿಯ ಸ್ಥಿತಿ ಗಂಭೀರವಾಗಿ ಮುಂದುವರಿಯುತ್ತಿದೆ.
ಕಳಿಯಾಟ ವೀಕ್ಷಣೆಗೆ ಜನಸಂದಣಿ:
ಮಲಬಾರ್ ಪ್ರದೇಶದ ಕಳಿಯಾಟ ಮಹೋತ್ಸವಗಳಿಗೆ ಚಾಲನೆ ರೂಪದಲ್ಲಿ ಮೊದಲ ಉತ್ಸವ ಇದಾಗಿದ್ದು,ದೈವಕೋಲ ವೀಕ್ಷಣೆಗಾಗಿ 5ಸಾವಿರಕ್ಕೂ ಹೆಚ್ಚು ಮಂದಿ ಭಕ್ತಾದಿಗಳು ಬಂದು ಸೇರಿದ್ದರು. ಶಬ್ದಕೇಳಿಬಂದ ಆರಂಭದಲ್ಲಿ ಪಟಾಕಿ ಸಿಡಿಯುತ್ತಿರುವುದಾಗಿ ಕೌತುಕದಿಂದ ನೋಡುತ್ತಿದ್ದವರಿಗೆ, ಕಾಲಬುಡದಲ್ಲೇ ಪಟಾಕಿ ಸ್ಪೋಟಗೊಳ್ಳುತ್ತಿರುವುದು ನಂತರವಷ್ಟೆ ತಿಳಿದು ಬಂದಿದೆ. ಈ ವೇಳೆಗೆ ಭಾರಿ ಪ್ರಮಾಣದಲ್ಲಿ ಬೆಂಕಿ ಹಾಗೂ ದಟ್ಟ ಹೊಗೆ ಆವರಿಸಿ ಜನರಿಗೆ ತಕ್ಷಣ ಓಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆಗೆ ಬಹುತೇಕ ಮಂದಿಯ ಕೈ, ಕಾಲು, ಮುಖ ಬೆಮಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟುಕೊಂಡಿತ್ತು.
ನಾಡಿನ ಜನತೆಯನ್ನು ಆತಂಕಕ್ಕೆ ತಳ್ಳಿದ ಆಂಬುಲೆನ್ಸ್ ಸೈರನ್:
ನೀಲೇಶ್ವರ ವೀರರ್‍ಕಾವು ಕ್ಷೆತ್ರದಲ್ಲಿ ಸೋಮವಾರ ತಡ ರಾತ್ರಿ ಬೆಂಕಿ ದುರಂತ ಸಂಭವಿಸಿದ ಅಲ್ಪ ಹೊತ್ತಲ್ಲಿ ಪೇಟೆಯ ನಾಲ್ಕೂ ಭಾಗಗಳಿಂದ ಆಂಬುಲೆನ್ಸ್ ಓಡಾಟ ಆರಂಭಿಸಿದ್ದು, ಪೇಟೆಯ ಜನರನ್ನು ದಂಗಾಗಿಸಿತ್ತು. ಬಹುತೇಕ ಆಸ್ಪತ್ರೆಗಳ ಹಾಗೂ ಖಾಸಗಿ ಸಂಸ್ಥೆಗಳ ಆಂಬುಲೆನ್ಸ್‍ಗಳು ಸೈರನ್ ಮೊಳಗಿಸುತ್ತಾ ವೀರರ್‍ಕಾವು ಕ್ಷೇತ್ರ ಹಾಗೂ ಅಲ್ಲಿಂದ ವಿವಿಧ ಆಸ್ಪತ್ರೆಗಳಿಗೆ ಸಂಚರಿಸುತ್ತಿದ್ದ ದೃಶ್ಯ ಎದೆ ನಡುಗಿಸುವಂತಿತ್ತು. ಸಾಮಾನ್ಯ ಗಾಯಾಳುಗಳನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ಜಿಲ್ಲೆಯ ವಿವಿಧ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೆ, ಗಂಭೀರ ಸುಟ್ಟ ಗಾಯ ಹೊಂದಿದವರನ್ನು ಕೋಯಿಕ್ಕೋಡ್, ಕಣ್ಣೂರು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಂಟು ಮಂದಿ ವಿರುದ್ಧ ಕೇಸು:
ವೀರರ್‍ಕ್ಕಾವು ಸುಡುಮದ್ದು ಸ್ಪೋಟಕ್ಕೆ ದುರಂತಕ್ಕೆ ಸಂಬಂಧಿಸಿ ನೀಲೇಶ್ವರ ಠಾಣೆ ಪೊಲೀಸರು ಎಂಟು ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದು, ಕ್ಷೇತ್ರ ಸಮಿತಿ ಅದ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ಬಂಧಿಸಿದ್ದಾರೆ. ಕಳಿಯಾಟ ಮಹೋತ್ಸವ ಸಂದರ್ಭ ವಿವಿಧ ದೈವಗಳ ನರ್ತನ ಸೇವೆ ನಡೆಯುತ್ತಿದ್ದು, ಪ್ರತಿ ದೈವ ನರ್ತನ ಸೇವೆ ಮಧ್ಯೆ ಸುಡುಮದ್ದು ಪ್ರದರ್ಶನ ನಡೆಯುವುದು ವಾಡಿಕೆಯಾಗಿದೆ. ಈ ರೀತಿ ಸಿಡಿಸಲು ತಂದಿರಿಸಿದ್ದ ಪಟಾಕಿ ದಾಸ್ತಾನು ಕೇಂದ್ರಕ್ಕೆ ಬೆಂಕಿ ತಗುಲಿ ಅನಾಹುತ ಸಂಭವಿಸಿದೆ. ಮುಂಜಾಗ್ರತ ಕ್ರಮ ಅಳವಡಿಸದೆ, ಕ್ಷೇತ್ರದಿಂದ ಅಲ್ಪ ದೂರದಲ್ಲಿ ಸುಡುಮದ್ದು ಸ್ಪೋಟಿಸುತ್ತಿದ್ದುದು ದುರಂತಕ್ಕೆ ಕಾರಣವೆಂದು ಸಂಶಯಿಸಲಾಗಿದೆ.
ಚಿತ್ರ ಮಾಹಿತಿ:1) ದುರಂತ ಸಂಭವಿಸಿದ ನೀಲೇಶ್ವರ ತೆರು ಅಞೂಟ್ಟಂಬಲ ವೀರರ್‍ಕ್ಕಾವು ಶ್ರೀ ಮೂವಾಳಂಕುಯಿ ಚಾಮುಂಡಿ ಕ್ಷೇತ್ರ ಎದುರು ಜಮಾಯಿಸಿದ ಜನರು.
2): ಸುಡುಮದ್ದು ಸ್ಪೋಟದಿಂದ ಕ್ಷೇತ್ರದ ಕಟ್ಟಡಕ್ಕೆ ಹಾಣಿಯುಂಟಾಗಿದೆ.
3): ಸಪೋಟದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವ ಪೊಲಿಸರು.