ನವದೆಹಲಿ: ಬಾಂಬ್ ಬೆದರಿಕೆ ಇದ್ದ ಕಾರಣ ಫ್ರಾಂಕ್‌ಫರ್ಟ್‌ಗೆ ತೆರಳುವ ವಿಸ್ತಾರ ವಿಮಾನಕ್ಕೆ ತನ್ನ ವಾಯುಪ್ರದೇಶವನ್ನು ಬಳಸಲು ಅಫ್ಗಾನಿಸ್ತಾನದ ಅಧಿಕಾರಿಗಳು ಅನುಮತಿ ನೀಡಲಿಲ್ಲ ಎಂದು ವರದಿಯಾಗಿದೆ.
'ವಿಸ್ತಾರ UK17 ವಿಮಾನವು ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ.
ರಾಷ್ಟ್ರ ರಾಜಧಾನಿ ದೆಹಲಿಯಿಂದ 142 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಸ್ತಾರ UK17 ವಿಮಾನವು ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಶನಿವಾರ ತುರ್ತು ಭೂಸ್ಪರ್ಶ ಮಾಡಿತ್ತು. ಬಾಂಬ್ ಬೆದರಿಕೆ ಇದ್ದ ಕಾರಣ ಅಫ್ಗಾನಿಸ್ತಾನ ಪ್ರವೇಶಿಸುವುದಕ್ಕೆ ಅಲ್ಲಿನ ಅಧಿಕಾರಿಗಳು ಅನುಮತಿ ನೀಡಲಿಲ್ಲ. ಆದ್ದರಿಂದ ವಿಮಾನವನ್ನು ದೆಹಲಿಗೆ ಹಿಂತಿರುಗಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಸಾಮಾನ್ಯವಾಗಿ ಫ್ರಾಂಕ್‌ಫರ್ಟ್‌ಗೆ ತೆರಳುವ ವಿಮಾನಗಳು ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಇತರ ಕೆಲವು ದೇಶಗಳ ವಾಯುಪ್ರದೇಶದ ಮಾರ್ಗವಾಗಿ ಸಂಚರಿಸುತ್ತವೆ.
ಸದ್ಯ ಈ ವಿಷಯಕ್ಕೆ ಸಂಬಂಧಿಸಿ ವಿಮಾನಯಾನ ಸಂಸ್ಥೆಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಭಾರತದ ವಿಮಾನಯಾನ ಸಂಸ್ಥೆಗಳಿಗೆ ಕಳೆದೊಂದು ವಾರದಿಂದ ಬಂದಿರುವ ಬಾಂಬ್ ಬೆದರಿಕೆ ಸಂದೇಶಗಳ ಸಂಖ್ಯೆ 100ಕ್ಕೆ ತಲುಪಿದ್ದು, ಇವೆಲ್ಲವೂ ಹುಸಿ ಸಂದೇಶಗಳು ಎನ್ನುವುದು ಖಚಿತಪಟ್ಟಿದೆ. ಭಾನುವಾರವೂ ಕೂಡ 20ರಿಂದ 30 ಹುಸಿ ಸಂದೇಶಗಳು ಇಂಡಿಗೊ, ಏರ್ ಇಂಡಿಯಾ, ವಿಸ್ತಾರಾ ಮತ್ತು ಆಕಾಸಾ ಏರ್ ಸಂಸ್ಥೆಗಳಿಗೆ ಬಂದಿದ್ದು, ವಿಮಾನಗಳ ಸಂಚಾರದಲ್ಲಿ ವ್ಯತ್ಯಯಕ್ಕೆ ಕಾರಣವಾದವು.