ಕುಂಬಳೆ: ಮಂಗಲ್ಪಾಡಿ ಪಂಚಾಯತಿಯ 13 ನೇ ವಾರ್ಡ್ ಗೆ ಸೇರಿದ ಬಂದ್ಯೋಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿಎಂ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಕುಂಜತ್ತೂರು ಮೂಲದ ವೈದ್ಯ ಕೆ.ಎ.ಖಾದರ್ ಆಸ್ಪತ್ರೆಯ ವಿರುದ್ದ ಆರ್ಥಿಕ ವಂಚನೆಯ ಆರೋಪ ಮಾಡಿ ಕುಂಬಳೆ ಪ್ರೆಸ್ ಪೋರಂನಲ್ಲಿ ಮಂಗಳವಾರ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಮಗ್ರ ವಂಚನೆಯ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂದ್ಯೋಡು - ಪೆರ್ಮುದೆ ಲೋಕೋಪಯೋಗಿ ರಸ್ತೆ ಬಳಿ ಕಾರ್ಯನಿರ್ವಹಿಸುತ್ತಿರುವ ಡಿಎಂ ಹೆಲ್ತ್ ಸೆಂಟರ್ ಕಳೆದ ಹತ್ತು ವರ್ಷಗಳಿಂದ ಪಂಚಾಯಿತಿಯ ಅನುಮತಿ ಅಥವಾ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ. ಬಾಯಾರಿನ ಡಿ.ಎಂ.ಬಶೀರ್ ಉರ್ಫ್ ಬಶೀರ್ ಮುಹಮ್ಮದ್ ಕುಂಞÂ್ಞ ಎಂಬವರು ಆಸ್ಪತ್ರೆಯ ಅನಧಿಕೃತ ಸ್ಥಾನವನ್ನು ತೋರಿಸಿ ಹಲವು ಜನರಿಂದ ಕೋಟ್ಯಂತರ ರೂಪಾಯಿ ಹೂಡಿಕೆಯನ್ನು ಸ್ವೀಕರಿಸಿ ವಂಚಿಸಿರುವುದಾಗಿ ಆರೋಪಿಸಿದರು. ಹೆಚ್ಚಿನ ಲಾಭದ ಭರವಸೆ ನೀಡಿ ಒಂದೂವರೆ ವರ್ಷದೊಳಗೆ ಬಶೀರ್ ಎರಡು ಹಂತಗಳಲ್ಲಿ ಎಪ್ಪತ್ತೈದು ಲಕ್ಷ ರೂಪಾಯಿಗಳನ್ನು ತನ್ನಿಂದ ಪಡೆದಿರುವುದಾಗಿ ಅವರು ತಿಳಿಸಿದರು.
ಕುಂಬಳೆಯ ಪ್ರಮುಖ ವಕೀಲರ ನೇತೃತ್ವದಲ್ಲಿ ಶಿರಿಯಾದ ಶಾಫಿ ಸಅದಿ ಹಾಗೂ ಆರಿಕ್ಕಾಡಿಯ ಮುಹಮ್ಮದ್ ಹನೀಫ್ ಅವರ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ ಎಂದರು. ಹೆಚ್ಚಿನ ಲಾಭಾಂಶವನ್ನು ನೀಡುವ ಭರವಸೆ ನೀಡಿ ಹಲವು ಜನರಿಂದ ಕೋಟಿಗಟ್ಟಲೆ ವಂಚಿಸಿ ಬಶೀರ್ ಈಗ ವಿದೇಶದಲ್ಲಿ ತಲೆಮರೆಸಿರುವರು. ಅನೇಕರು ತಮ್ಮ ಹಣವನ್ನು ಮರಳಿ ಪಡೆಯಲು ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇದೇ ವೇಳೆ ಮತ್ತೊಂದು ಕಡೆ ಆಸ್ಪತ್ರೆಯನ್ನು ಮಾರಾಟ ಮಾಡುವ ಯತ್ನವೂ ನಡೆಯುತ್ತಿದೆ ಎಂದರು.
ಕಳೆದು 2020ರಿಂದ ಆಸ್ಪತ್ರೆ ಅಕ್ರಮವಾಗಿ ಕಾರ್ಯಾಚರಿಸುತ್ತಿರುವುದಾಗಿ ತಿಳಿದು ಬಂದಿದೆ. ವರ್ಷಗಳ ಹಿಂದೆಯೇ ಪರವಾನಗಿ ಇಲ್ಲದೆ ಆಸ್ಪತ್ರೆ ನಡೆಸುತ್ತಿರುವ ಬಗ್ಗೆ ಅಧಿಕಾರಿಗಳಿಗೆ ದೂರು ಬಂದಿದ್ದು, ಪಂಚಾಯಿತಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರ್‍ಟಿಐ ದಾಖಲೆ ಸ್ಪಷ್ಟಪಡಿಸಿದೆ ಎಂದವರು ಆರೋಪಿಸಿರುವರು.