90 ಶಾಸಕರ ಆಯ್ಕೆಗಾಗಿ ಶನಿವಾರ ಮತದಾನ ನಡೆಯಲಿದ್ದು, 2 ಕೋಟಿಯಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಅ.8ರಂದು ಮತ ಎಣಿಕೆ ನಡೆಯಲಿದೆ.
2019ರಲ್ಲಿ ನಡೆದ ಚುನಾವಣೆಯಲ್ಲಿ ಬಹುಮತಕ್ಕೆ ಅಗತ್ಯವಿರುವಷ್ಟು ಸ್ಥಾನಗಳನ್ನು ಪಡೆಯುವಲ್ಲಿ ಬಿಜೆಪಿ ವಿಫಲವಾಗಿತ್ತು. ಆದರೆ, ಜೆಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ಸರ್ಕಾರ ರಚನೆಗೆ ಬೇಕಾಗಿದ್ದ 46 ಸ್ಥಾನಗಳ ಗಡಿಯನ್ನು ದಾಡಿ, ಅಧಿಕಾರಕ್ಕೆ ಏರಿತ್ತು.
ಈಗ, ರಾಜಕೀಯ ಸಮೀಕರಣ ಬದಲಾಗಿದ್ದು, ವರ್ಷದ ಆರಂಭದಲ್ಲಿ ಬಿಜೆಪಿ ಜೊತೆಗಿನ ಸಖ್ಯವನ್ನು ಜೆಜೆಪಿ ತೊರೆದಿದೆ.
ಬಹಿರಂಗ ಪ್ರಚಾರ ಅಂತ್ಯಗೊಂಡ ಗುರುವಾರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೂಹ್ ಮತ್ತು ಭವರಿಯಾದಲ್ಲಿ ಮತ ಯಾಚನೆ ಮಾಡಿದರು.
ಬಿಜೆಪಿಯ ಹಿರಿಯ ನಾಯಕರ ಪೈಕಿ, ಪ್ರಧಾನಿ ನರೇಂದ್ರ ಮೋದಿ ಕೊನೆ ಎರಡು ದಿನ ರಾಜ್ಯದಲ್ಲಿನ ಪ್ರಚಾರದಿಂದ ದೂರ ಉಳಿದಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿಂದಿನ ನಾಲ್ಕು ದಿನ ಪ್ರಚಾರ ಕೈಗೊಂಡಿರಲಿಲ್ಲ.
ಹಣಾಹಣಿ: ಹರಿಯಾಣದಲ್ಲಿ ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ನೇರ ಹಣಾಹಣಿ ಇದೆ. ಇನ್ನೊಂದೆಡೆ, ಆಮ್ ಆದ್ಮಿ ಪಕ್ಷ (ಎಎಪಿ), ಜೆಜೆಪಿ-ಎಎಸ್‌ಪಿ(ಕಾಶ್ಶಿರಾಂ) ಮತ್ತು ಐಎನ್‌ಎಲ್‌ಡಿ-ಬಿಎಸ್‌ಪಿ ಅಭ್ಯರ್ಥಿಗಳು ಕೂಡ ಕಣದಲ್ಲಿದ್ದಾರೆ.
ಯಾವ ಪಕ್ಷ ಇಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂಬ ಲೆಕ್ಕಾಚಾರ ಇದ್ದರೂ, ಒ.ಪಿ.ಚೌಟಾಲಾ ಅವರ ಪುತ್ರರ ನೇತೃತ್ವದ ಐಎನ್‌ಎಲ್‌ಡಿ ಮತ್ತು ಜೆಜೆಪಿ ಪಕ್ಷಗಳು ಎಷ್ಟು ಸ್ಥಾನಗಳನ್ನು ಗೆಲ್ಲಲಿವೆ ಎಂಬುದರ ಮೇಲೆಯೇ ಎಲ್ಲರ ಗಮನ ಕೇಂದ್ರೀಕೃತವಾಗಿದೆ.