ಕಾಸರಗೋಡು: ಕೇರಳ ಕಂಡ ಅತ್ಯಂತ ಕೆಟ್ಟ ಆಡಳಿತಕ್ಕೆ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರ ಸಾಕ್ಷಿಯಾಗಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ತಿಳಿಸಿದ್ದಾರೆ. ಅವರು ಎಡರಂಗ ಸರ್ಕಾರದ ದುರಾಡಳಿತದ ವಿರುದ್ಧ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿ ಉದ್ಘಾಟಿಸಿ ಮಾತನಾಡಿದರು. ಅಭಿವೃದ್ಧಿ ಕುಂಠಿತ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಎಡರಂಗ ಸರ್ಕಾರದ ಸಾಧನೆಯಾಗಿದೆ ಎಂದು ತಿಳಿಸಿದ ಅವರು, ಕೇರಳದಲ್ಲಿ ವಿರೋಧ ಪಕ್ಷ ಎಂಬುದು ಅಸ್ತಿತ್ವದಲ್ಲಿಲ್ಲದ ಸ್ಥಿತಿಯಿದೆ. ಕೇರಳದಲ್ಲಿ ಎಡರಂಗ ಸರ್ಕಾರ ಎಲ್ಲ ರಂಗಗಳಲ್ಲೂ ವೈಫಲ್ಯ ಸಾಧಿಸುತ್ತಾ, ಅಭಿವೃದ್ಧಿ ಕಾರ್ಯಗಳು ನೆಲಕಚ್ಚಿದ್ದರೂ, ಇದನ್ನು ಗಟ್ಟಿ ಸ್ವರದಲ್ಲಿ ಪ್ರತಿಭಟಿಸಲೂ ಐಕ್ಯರಂಗಕ್ಕೆ ಸಾಧ್ಯವಾಗುತ್ತಿಲ್ಲ. ಎಡರಂಗ ಮತ್ತು ಐಕ್ಯರಂಗ ಹೊಂದಾಣಿಕೆಯ ರಾಜಕೀಯ ನಡೆಸುತ್ತಿದ್ದು, ಐಕ್ಯರಂಗ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವ ಎಲ್ಲ ಅರ್ಹತೆ ಕಳೆದುಕೊಂಡಿದೆ. ಸರ್ಕಾರದ ಆರ್ಥಿಕ ಸ್ಥಿತಿ ಶೋಚನೀಯಾವಸ್ಥೆಯಲ್ಲಿದ್ದು, ಖಜಾನೆ ನಿಯಂತ್ರಣ ಹೇರಬೇಕಾಗಿ ಬಂದರೂ, ಸರಕಾರದ ಅನಗತ್ಯ ಖರ್ಚು, ಸಚಿವರ ಆಡಂಬರಕ್ಕೆ ಕೊರತೆಯಿಲ್ಲದಾಗಿದೆ ಎಂದು ಟೀಕಿಸಿದರು.
ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಬಿ.ಸಿ.ರೋಡ್ ಜಂಕ್ಷನ್‍ನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯನ್ನು ಜಿಲ್ಲಾಧಿಕಾರಿ ಕಚೇರಿ ಎದುರು ಪೊಲೀಸರು ತಡೆದರು. ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯೆ ಪ್ರಮೀಳಾ ಸಿ.ನಾಯಕ್, ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್, ಕೌನ್ಸಿಲ್ ಸದಸ್ಯ ಎನ್. ಸತೀಶ್, ಜಿಲ್ಲಾ ಉಪಾಧ್ಯಕ್ಷ ರಾಮಪ್ಪ ಮಂಜೇಶ್ವರ, ಕಾರ್ಯದರ್ಶಿಗಳಾದ ಮನುಲಾಲ್ ಮೇಲತ್, ಎನ್. ಮಧು, ಮಂಡಲ ಸಮಿತಿ ಅಧ್ಯಕ್ಷರಾದ ಟಿ.ವಿ. ಶಿಬಿನ್, ಪ್ರಮೀಳಾ ಮಜಲ್ ಮತ್ತು ಆದರ್ಶ ಮಂಜೇಶ್ವರ ನೇತೃತ್ವ ವಹಿಸಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎ. ವೇಲಾಯುಧನ್ ಸ್ವಾಗತಿಸಿ, ವಿಜಯ ರೈ ವಂದಿಸಿದರು.