HEALTH TIPS

ಬಿಷ್ಣೋಯ್‌ ಗ್ಯಾಂಗ್‌ನ ಹಿಟ್‌ ಲಿಸ್ಟ್‌ನಲ್ಲಿ ಸಲ್ಮಾನ್ ಖಾನ್ ಸೇರಿ ಹಲವರ ಹೆಸರು!

 ವದೆಹಲಿ: ಮಾಜಿ ಸಚಿವ, ಎನ್‌ಸಿಪಿ (ಅಜಿತ್ ಪವಾರ್‌ ಬಣ) ಮುಖಂಡ ಬಾಬಾ ಸಿದ್ದೀಕಿ (66) ಅವರ ಹತ್ಯೆಗೆ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ತಂಡಕ್ಕೂ ನಂಟಿರುವ ಬಗ್ಗೆ ಮುಂಬೈ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

'ಸಿದ್ದೀಕಿ ಅವರ ಹತ್ಯೆಯ ಹೊಣೆ ಹೊತ್ತು, ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಎನ್ನಲಾದ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ಇದರ ಸತ್ಯಾಸತ್ಯತೆ ಪರಿಶೀಲಿಸುತ್ತಿದ್ದೇವೆ' ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿದ್ದೀಕಿ ಅವರ ಕೊಲೆ ವ್ಯವಹಾರ ದ್ವೇಷ ಕಾರಣದಿಂದಾಗಿ ನಡೆದಿದೆಯೇ? ಸುಪಾರಿ ಕೊಲೆಯೊ? ಎಂಬುದು ಸೇರಿದಂತೆ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಈ ಪ್ರಕಣದಲ್ಲಿ ಪೊಲೀಸರು ಇದುವರೆಗೆ ಹರಿಯಾಣದ ನಿವಾಸಿ ಗುರ್ಮೈಲ್‌ ಬಲ್ಜಿತ್‌ ಸಿಂಗ್‌ (23), ಉತ್ತರ ಪ್ರದೇಶದ ಧರ್ಮರಾಜ್‌ ರಾಜೇಶ್‌ ಕಶ್ಯಪ್‌ (19), ಹರೀಶ್‌ ಕುಮಾರ್ ಬಾಲಕ್ರಮ್ (23) ಮತ್ತು ಪುಣೆಯ ಸಹ ಸಂಚುಕೋರ ಪ್ರವೀಣ್‌ ಲೋನ್ಕರ್‌ ಅವರನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಬೇಕಿರುವ ಮೊಹಮ್ಮದ್‌ ಜಿಶನ್‌ ಅಖ್ತರ್‌ ಮತ್ತು ಗೌತಮ್‌ಗಾಗಿ ಹುಡುಕಾಟ ನಡೆಸಿದ್ದಾರೆ.

ಬಂಧಿತ ಸಂಚುಕೋರರ ಹಿಟ್‌ ಲಿಸ್ಟ್‌ನಲ್ಲಿ ಬಾಲಿವುಡ್‌ ನಟ ಸಲ್ಮಾನ್ ಖಾನ್ ಸೇರಿದಂತೆ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ನ ಪ್ರತಿಸ್ಪರ್ಧಿಗಳ ಹೆಸರುಗಳಿರುವುದು ವಿಚಾರಣೆ ವೇಳೆ ಬಹಿರಂಗಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಚುಕೋರರ ಹಿಟ್‌ ಲಿಸ್ಟ್‌ನಲ್ಲಿರುವ ಹೆಸರುಗಳು...

ಸಲ್ಮಾನ್ ಖಾನ್: ಸಂಚುಕೋರರ ಹಿಟ್‌ ಲಿಸ್ಟ್‌ನಲ್ಲಿರುವ ಮೊದಲ ಹೆಸರೇ ಬಾಲಿವುಡ್‌ ಪ್ರಸಿದ್ಧ ನಟ ಸಲ್ಮಾನ್ ಖಾನ್. 1998ರ ಅಕ್ಟೋಬರ್ 1-2 ಮಧ್ಯರಾತ್ರಿ ರಾಜಸ್ಥಾನದ ಜೋಧ್‌ಪುರದ ಹೊರವಲಯದಲ್ಲಿನ ಕಂಕಣಿ ಗ್ರಾಮದ ಬಳಿ ಸಲ್ಮಾನ್‌ ಅವರು ಎರಡು ಕೃಷ್ಣಮೃಗಗಳನ್ನು ಗುಂಡಿಕ್ಕಿ ಕೊಂದ ಆರೋಪ ಎದುರಿಸುತ್ತಿದ್ದಾರೆ. ಬಾಲಿವುಡ್‌ ಸಿನಿಮಾ 'ಹಮ್‌ ಸಾಥ್‌ ಸಾಥ್‌ ಹೇ' ಚಿತ್ರೀಕರಣದ ವೇಳೆ ಈ ಘಟನೆ ನಡೆದಿತ್ತು. ಈ ವೇಳೆ ಸಲ್ಮಾನ್‌ ಅವರ ಜತೆಗೆ ನಟರಾದ ಸೈಫ್‌ ಅಲಿ ಖಾನ್‌ ಸೋನಾಲಿ ಬೇಂದ್ರೆ ಟಬು ಮತ್ತು ನೀಲಂ ಸಹ ಇದ್ದರು.

ಕೃಷ್ಣಮೃಗಗಳನ್ನು ಕೊಂದ ಆರೋಪ ಎದುರಿಸುತ್ತಿರುವ ಸಲ್ಮಾನ್‌ ಖಾನ್‌ ಅವರು ಬಿಷ್ಣೋಯ್ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಾಗಾಗಿ ಸಲ್ಮಾನ್‌ಗೆ 31 ವರ್ಷದ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ನೇತೃತ್ವದ ತಂಡದಿಂದ ಸರಣಿ ಬೆದರಿಕೆಗಳು ಬಂದಿವೆ. ಈ ಹಿನ್ನೆಲೆ ಸಲ್ಮಾನ್‌ ಖಾನ್ ಸೇರಿದಂತೆ ಕುಟುಂಬಸ್ಥರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಶಗನ್‌ಪ್ರೀತ್ ಸಿಂಗ್: ಸಂಚುಕೋರರ ಹಿಟ್‌ ಲಿಸ್ಟ್‌ನಲ್ಲಿರುವ ಎರಡನೇ ಹೆಸರು ಶಗನ್‌ಪ್ರೀತ್ ಸಿಂಗ್. ಸಿಂಗ್ ಅವರು ಪಂಜಾಬಿ ಗಾಯಕ ದಿವಂಗತ ಸಿಧು ಮೂಸೆವಾಲಾ ಅವರ ಮ್ಯಾನೇಜರ್ ಆಗಿದ್ದರು. ಲಾರೆನ್ಸ್‌ ಬಿಷ್ಣೋಯ್‌ ಹಿರಿಯ ಸಹೋದರನೆಂದು ಕರೆಯಲಾಗುತ್ತಿದ್ದ ಅಕಾಲಿ ದಳದ ಯುವ ನಾಯಕ ವಿಕ್ಕಿ ಮಿದ್ದುಖೇರಾ ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದ್ದಕ್ಕೆ ಪ್ರತೀಕಾರವಾಗಿ ಶಗನ್‌ಪ್ರೀತ್‌ ಹತ್ಯೆಗೆ ಬಿಷ್ಣೋಯ್‌ ಗ್ಯಾಂಗ್ ಹೊಂಚು ಹಾಕಿದೆ ಎನ್ನಲಾಗಿದೆ.

ಕೌಶಲ್ ಚೌಧರಿ: ಸಂಚುಕೋರರ ಹಿಟ್‌ ಲಿಸ್ಟ್‌ನಲ್ಲಿರುವ ಮೂರನೇ ಹೆಸರು ಕೌಶಲ್ ಚೌಧರಿ. ಸದ್ಯ ಗುರುಗ್ರಾಮದ ಜೈಲಿನಲ್ಲಿರುವ ದರೋಡೆಕೋರ ಕೌಶಲ್ ಚೌಧರಿ ವಿರುದ್ಧ ವಿಕ್ಕಿ ಮಿದ್ದುಖೇರಾನನ್ನು ಹತ್ಯೆ ಮಾಡಲು ಮಾರಕಾಸ್ತ್ರಗಳನ್ನು ಪೂರೈಸಿದ ಆರೋಪವಿದೆ. ಹಾಗಾಗಿ ಮಿದ್ದುಖೇರಾ ಹತ್ಯೆಗೆ ಪ್ರತೀಕಾರವಾಗಿ ಕೌಶಲ್ ಚೌಧರಿಯನ್ನು ಕೊಲ್ಲಲು ಬಿಷ್ಣೋಯ್‌ ಗ್ಯಾಂಗ್ ಯೋಜನೆ ರೂಪಿಸಿರುವ ಅಂಶ ಪೊಲೀಸರ ತನಿಖೆ ವೇಳೆ ಬಯಲಾಗಿದೆ.

ಅಮಿತ್ ದಾಗರ್: ಸದ್ಯ ಜೈಲಿನಲ್ಲಿರುವ ಮತ್ತೊಬ್ಬ ದರೋಡೆಕೋರ ಅಮಿತ್ ದಾಗರ್‌ನನ್ನು ವಿಕ್ಕಿ ಮಿದ್ದುಖೇರಾ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆತನನ್ನು ಹತ್ಯೆ ಮಾಡಲು ಬಿಷ್ಣೋಯ್‌ ಗ್ಯಾಂಗ್ ಬಯಸಿದೆ ಎಂಬ ಸಂಗತಿ ಬಯಲಾಗಿದೆ.

ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಲಾರೆನ್ಸ್‌ ಬಿಷ್ಣೋಯ್‌ ಸದ್ಯ ಜೈಲಿನಲ್ಲಿದ್ದಾನೆ. ಆದರೂ ಆತನ ಸಹಚರರು 2022ರಲ್ಲಿ ಪಂಜಾಬಿ ಗಾಯಕ ಸಿದ್ದು ಮೂಸೆವಾಲಾ, 2023ರಲ್ಲಿ ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಸೇರಿದಂತೆ ಪ್ರಮುಖರ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಜತೆಗೆ, ಗಾಯಕರಾದ ಎ.ಪಿ. ಧಿಲ್ಲೋನ್ ಮತ್ತು ಗಿಪ್ಪಿ ಗಿರ್ವಾಲ್‌ ಅವರ ನಿವಾಸದ ಹೊರಗೆ ಗುಂಡಿನ ದಾಳಿ ನಡೆಸಿದ್ದರು.

ಲಾರೆನ್ಸ್‌ ಬಿಷ್ಣೋಯ್‌ ತಂಡದಿಂದ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಹಾಸ್ಯನಟ ಮುನವ್ವರ್‌ ಫಾರೂಕಿ ಅವರಿಗೂ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries