ನವದೆಹಲಿ: 'ಭಾರತ-ಕೆನಡಾ ನಡುವಣ ರಾಜತಾಂತ್ರಿಕ ಸಂಬಂಧಕ್ಕೆ ಆಗಿರುವ ಹಾನಿಯ ಹೊಣೆಗಾರಿಕೆಯು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಮೇಲಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.
'ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜೆಂಟ್‌ಗಳ ಪಾತ್ರ ಇದೆ ಎಂದು ಆರೋಪಿಸಿದಾಗ ನನ್ನಲ್ಲಿ ಯಾವುದೇ ಬಲವಾದ ಪುರಾವೆಗಳು ಇರಲಿಲ್ಲ.
ಚುನಾವಣಾ ಪ್ರಕ್ರಿಯೆಗಳಲ್ಲಿ ಹಾಗೂ ಪ್ರಜಾತಾಂತ್ರಿಕ ಸಂಸ್ಥೆಗಳಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪ ಕುರಿತ ವಿಚಾರಣೆ ನಡೆಸುತ್ತಿರುವ ತನಿಖಾ ಆಯೋಗದ ಮುಂದೆ ಟ್ರುಡೊ ಅವರು ಒಟ್ಟಾವದಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ಗುರುವಾರ ಬೆಳಿಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಕಟಣೆ ಹೊರಡಿಸಿದೆ.
'ನಾವು ನಿರಂತವಾಗಿ ಹೇಳುತ್ತಾ ಬಂದಿರುವುದನ್ನು ಟ್ರುಡೊ ಅವರ ಮಾತುಗಳು ದೃಢಪಡಿಸುತ್ತವೆ. ನಮ್ಮ ರಾಜತಾಂತ್ರಿಕ ಅಧಿಕಾರಿಗಳ ವಿರುದ್ಧದ ಗಂಭೀರ ಆರೋಪಗಳನ್ನು ಪುಷ್ಟೀಕರಿಸುವಂತಹ ಯಾವುದೇ ಪುರಾವೆಗಳನ್ನು ಕೆನಡಾ ಇದುವರೆಗೂ ಒದಗಿಸಿಲ್ಲ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
'ಕೆನಡಾದ ದರ್ಪದ ನಡವಳಿಕೆಯಿಂದಾಗಿ ಉಭಯ ದೇಶಗಳ ನಡುವಣ ಸಂಬಂಧಕ್ಕೆ ಹಾನಿ ಉಂಟಾಗಿದ್ದು, ಅದರ ಸಂಪೂರ್ಣ ಹೊಣೆಗಾರಿಕೆಯು ಟ್ರುಡೊ ಅವರ ಮೇಲಿದೆ' ಎಂದಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಿಸಬೇಕು- ಟ್ರುಡೊ
ವಾಷಿಂಗ್ಟನ್ ವರದಿ: 'ರಾಜಕೀಯ ಭಿನ್ನಾಭಿಪ್ರಾಯ ಅಥವಾ ಇತರ ಕಾರಣಗಳಿಂದ ಹಲವರು ತಮ್ಮ ತಾಯ್ನಾಡನ್ನು ತೊರೆದು ಕೆನಡಾಕ್ಕೆ ಬಂದಿದ್ದಾರೆ. ಅವರು ಹೊಂದಿರುವ ರಾಜಕೀಯ ದೃಷ್ಟಿಕೋನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವುದು ಕೆನಡಾ ಸರ್ಕಾರದ ಜವಾಬ್ದಾರಿಯಾಗಿದೆ' ಎಂದು ಟ್ರುಡೊ ತನಿಖಾ ಆಯೋಗದ ಮುಂದೆ ಹೇಳಿದ್ದಾರೆ.
'ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕುರಿತು ಭಿನ್ನಾಭಿಪ್ರಾಯ ಹೊಂದಿರುವ ಕೆನಡಾ ಪ್ರಜೆಗಳ ಬಗ್ಗೆ ಮಾಹಿತಿಯನ್ನು ಭಾರತದ ರಾಜತಾಂತ್ರಿಕರು ಸಂಗ್ರಹಿಸಿ, ಅದನ್ನು ಭಾರತ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಇರುವವರಿಗೆ ಹಾಗೂ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಂತಹ ಕ್ರಿಮಿನಲ್ ಸಂಘಟನೆಗಳಿಗೆ ರವಾನಿಸುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.
'ಹಿಂಸಾಚಾರ ತಡೆಗಟ್ಟುವ ಉದ್ದೇಶ'
ಟೊರಂಟೊ: ಕೆನಡಾದಲ್ಲಿ ಕೊಲೆ ಸುಲಿಗೆ ಸೇರಿದಂತೆ ಹಿಂಸಾತ್ಮಕ ಕೃತ್ಯಗಳಿಗೆ ಕಡಿವಾಣ ತೊಡಿಸುವ ಉದ್ದೇಶದಿಂದ ಕೆನಡಾ ಪೊಲೀಸರು ಭಾರತದ ರಾಜತಾಂತ್ರಿಕರ ವಿರುದ್ಧದ ತನ್ನ ಆರೋಪಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಬುಧವಾರ ಹೇಳಿದ್ದಾರೆ.
ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆಯಲ್ಲಿ ಕೆಲವು ಭಾರತೀಯ ರಾಜತಾಂತ್ರಿಕರು ಭಾಗಿಯಾಗಿದ್ದಾರೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (ಆರ್‌ಸಿಎಂಪಿ) ಸೋಮವಾರ ಆರೋಪಿಸಿತ್ತು. 'ಭಾರತವನ್ನು ಪ್ರಚೋದಿಸಲು ಅಥವಾ ಅವರೊಂದಿಗೆ ಹೋರಾಟ ನಡೆಸಲು ನಾವು ಬಯಸುವುದಿಲ್ಲ' ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
'ಕೆನಡಾದ ಸುರಕ್ಷತೆ ಮತ್ತು ಸಾರ್ವಭೌಮತ್ವದಲ್ಲಿ ಆಕ್ರಮಣಕಾರಿಯಾಗಿ ಮಧ್ಯಪ್ರವೇಶಿಸಬಹುದು ಎಂದು ಭಾವಿಸುವ ಮೂಲಕ ಭಾರತವು ಬಲುದೊಡ್ಡ ತಪ್ಪು ಮಾಡಿದೆ. ಕೆನಡಾ ಪ್ರಜೆಗಳ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ನಾವು ಪ್ರತಿಕ್ರಿಯಿಸಬೇಕಾಗಿತ್ತು' ಎಂದಿದ್ದಾರೆ.
'ಜನರ ಸುರಕ್ಷತೆಯನ್ನು ಖಾತರಿಪಡಿಸುವ ಉದ್ದೇಶದೊಂದಿಗೆ ಆರ್‌ಸಿಎಂಪಿಯು ಕೆಲವೊಂದು ವಿಷಯಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದೆ. ಕೆನಡಾದಲ್ಲಿ ನಡೆಯುತ್ತಿರುವ ಗುಂಡಿನ ದಾಳಿ ಮನೆಗಳ ಅತಿಕ್ರಮ ಪ್ರವೇಶ ಸುಲಿಗೆ ಪ್ರಕರಣ ಮತ್ತು ಕೊಲೆಗಳ ಸರಣಿಗೆ ಕಡಿವಾಣ ತೊಡಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು' ಎಂದು ಟ್ರುಡೊ ಅವರು ಹೇಳಿದ್ದಾರೆ.
'ಕೆನಡಾ ಕ್ರಮ ಕೈಗೊಂಡಿಲ್ಲ'
'ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯರು ಸೇರಿದಂತೆ ಹಲವರ ಬಗ್ಗೆ ನಾವು ಕೆನಡಾ ಸರ್ಕಾರದೊಂದಿಗೆ ಮಾಹಿತಿ ಹಂಚಿಕೊಂಡಿದ್ದೇವೆ ಮತ್ತು ಅವರನ್ನು ಬಂಧಿಸಲು ಅಥವಾ ಕಾನೂನಿನ ಪ್ರಕಾರ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದೇವೆ' ಎಂದು ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
'ಆದರೆ ಅವರ ವಿರುದ್ಧ ಕೆನಡಾ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ನಿಜಕ್ಕೂ ಅಚ್ಚರಿ ಉಂಟುಮಾಡಿದೆ' ಎಂದಿದ್ದಾರೆ.
'ನಾವು ಯಾರನ್ನು ಗಡೀಪಾರು ಮಾಡುವಂತೆ ಮತ್ತು ಯಾರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದೇವೋ ಅವರು ಮಾಡಿರುವ ಅಪರಾಧ ಕೃತ್ಯಗಳಿಗಾಗಿ ಕೆನಡಾ ಪೊಲೀಸರು ಭಾರತವನ್ನು ದೂಷಿಸುತ್ತಿದ್ದಾರೆ' ಎಂದು ಟೀಕಿಸಿದ್ದಾರೆ.