ಬದಿಯಡ್ಕ: ರಾಷ್ಟ್ರೀಯ ಸ್ವಯಂಸೇವಕ ಸಂಘ ಬದಿಯಡ್ಕ ಖಂಡ್ ವತಿಯಿಂದ ಆಯೋಜಿಸಲಾಗಿದ್ದ ಪಥಸಂಚಲನ ಮತ್ತು ಬದಿಯಡ್ಕ ಭಾರತೀ ನಗರದಲ್ಲಿ ಜರಗಿದ ಸಾರ್ವಜನಿಕ ಸಮಾರಂಭದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಮಾತನಾಡಿದರು. ಇಡೀ ವಿಶ್ವದಲ್ಲಿ ಭಾರತದ ಕುಟುಂಬ ಪದ್ಧತಿ ಅತ್ಯುತ್ತಮವಾಗಿದ್ದು, ಅದನ್ನು ಉಳಿಸಿ ಬೆಳೆಸಬೇಕಾದುದು ಪ್ರತಿಯೋರ್ವ ಭಾರತೀಯನ ಕರ್ತವ್ಯವಾಗಿದೆ. ಅದರಲ್ಲೂ ಯುವಜನಾಂಗಕ್ಕೆ ಹಿರಿಯರ ಸಮರ್ಥ ಮಾರ್ಗದರ್ಶನ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಚಿಂತಿಸಿ ಮುನ್ನಡೆಯಬೇಕು. ದೇವಸ್ಥಾನ, ಸ್ಮಶಾನ, ಕುಡಿಯುವ ನೀರಿನಲ್ಲಿ ಸಮಾನತೆಯನ್ನು ಕಾಣುವ ಮೂಲಕ ಹಿಂದೂಸಮಾಜವು ಒಗ್ಗಟ್ಟನಿಂದ ಮುಂದುವರಿಯಬೇಕು. ಪರಸ್ಪರ ಗೌರವಿಸುವ ಸನಾತನ ವ್ಯವಸ್ಥೆಯು ಅತ್ಯಂತ ಶ್ರೇಷ್ಠವಾದುದು. ಮನೆಗಳಲ್ಲಿ ಭಜನೆ ಮಾಡುವುದರಿಂದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಶಕ್ತಿ ವೃದ್ಧಿಯಾಗುವುದರ ಜೊತೆಗೆ ಶಾಂತಿ ಸಹಬಾಳ್ವೆ ಸಾಮರಸ್ಯ ನೆಲೆಗೊಳ್ಳುತ್ತದೆ. ಜೊತೆಗೆ ಪರಿಸರ ಸಂರಕ್ಷಣೆಯೂ ನಮ್ಮ ಹೊಣೆಯಾಗಿದೆ. ಶಿಷ್ಟಾಚಾರದಿಂದ ಬದುಕು ಸಾಗಿಸಿದಾಗ ಸಾಮರಸ್ಯದ ವ್ಯವಸ್ಥೆ ಮೂಡುತ್ತದೆ. ಸರ್ಕಾರಿ ನಿಯಮಗಳನ್ನು ಪಾಲನೆ ಮಾಡಿದಾಗ ಉತ್ತಮ ಸಮಾಜಮುಖೀ ಚಿಂತನೆಯೊಂದಿಗೆ ನಾಡು ಸುಭಿಕ್ಷವಾಗುತ್ತದೆ. ಸ್ವದೇಶಿ ವಸ್ತುಗಳನ್ನು ಬಳಸುವುದರ ಮೂಲಕ ದೇಶೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಬೇಕು. ಈ ಮೂಲಕ ದೇಶದ ಆರ್ಥಿಕತೆಗೂ ಸಹಕಾರ ನೀಡಿದಂತಾಗುತ್ತದೆ. ಜೊತೆಗೆ ಗುಡಿಕೈಗಾರಿಕೆಗಳು, ಸಣ್ಣ, ಮಧ್ಯಮ ವರ್ಗದ ಕೈಗಾರಿಕೆಗಳನ್ನು ಬೆಂಬಲಿಸಿದಂತಾಗುತ್ತದೆ ಎಂದು ಅವರು ನುಡಿದರು.
* ನಿವೃತ್ತ ಐಎಎಸ್ ಅಕಾರಿ ಕೆ. ಗೋಪಾಲಕೃಷ್ಣ ಭಟ್ ಮುಖ್ಯಅತಿಥಿಯಾಗಿದ್ದರು. ಆರೆಸ್ಸೆಸ್ ಅಖಿಲ ಭಾರತೀಯ ಸಹ ಪ್ರಚಾರಕ ಪ್ರಮುಖ್ ಸುನಿಲ್ ಕುಲಕರ್ಣಿ, ಜ್ಯೇಷ್ಠ ಕಾರ್ಯಕರ್ತರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.
* ಬದಿಯಡ್ಕ ನವಜೀವನ ಶಾಲಾ ಪರಿಸರದಿಂದ ಆರಂಭವಾದ ಪಥಸಂಚಲನದಲ್ಲಿ 1000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.