ನವದೆಹಲಿ: ಬಾಲ್ಯ ವಿವಾಹದ ಕುರಿತಾಗಿ ದೇಶದ ಎಲ್ಲ ಜಿಲ್ಲೆಗಳನ್ನು ಒಳಗೊಂಡ ಅಧ್ಯಯನವೊಂದನ್ನು ನಡೆಸಿರುವ ಕೇಂದ್ರ ಸರ್ಕಾರವು, ಬಾಲ್ಯ ವಿವಾಹದ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಹೇಳಿದೆ.
2022ರಲ್ಲಿ ದೇಶದಾದ್ಯಂತ ಒಟ್ಟು 1,002 ಬಾಲ್ಯ ವಿವಾಹದ ಪ್ರಕರಣಗಳು ವರದಿಯಾಗಿವೆ ಎಂಬುದನ್ನು ಮಕ್ಕಳ ಹಕ್ಕುಗಳ ರಕ್ಷಣೆಗಾಗಿನ ರಾಷ್ಟ್ರೀಯ ಆಯೋಗ ನಡೆಸಿದ ಸಮೀಕ್ಷೆಯು ಹೇಳಿದೆ.
2021ರಲ್ಲಿ ವರದಿಯಾದ ಬಾಲ್ಯ ವಿವಾಹಗಳ ಸಂಖ್ಯೆ 1050 ಆಗಿತ್ತು. 2022ರಲ್ಲಿ ಕರ್ನಾಟಕದಲ್ಲಿ 215 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿದ್ದು, ಬಾಲ್ಯ ವಿವಾಹ ಪ್ರಕರಣಗಳಲ್ಲಿ ಕರ್ನಾಟಕವು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ.
ಅಸ್ಸಾಂನಲ್ಲಿ 163 ಪ್ರಕರಣಗಳು, ತಮಿಳುನಾಡಿನಲ್ಲಿ 155 ಪ್ರಕರಣಗಳು ಹಾಗೂ ಪಶ್ಚಿಮ ಬಂಗಾಳದಲ್ಲಿ 121 ಪ್ರಕರಣಗಳು 2022ರಲ್ಲಿ ವರದಿಯಾಗಿವೆ.
ಬಾಲ್ಯ ವಿವಾಹಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದರೂ, ದೇಶದ 784 ಜಿಲ್ಲೆಗಳ ಪೈಕಿ 596 ಜಿಲ್ಲೆಗಳು ಮಾತ್ರ ಅಗತ್ಯ ಪ್ರತಿಕ್ರಿಯೆ ಸಲ್ಲಿಸಿವೆ, ತಮ್ಮ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸಿವೆ ಎಂದು ಆಯೋಗವು ಹೇಳಿದೆ.
ಬಾಲ್ಯ ವಿವಾಹ ನಡೆಯುವುದಕ್ಕೆ ಕಾರಣವಾಗುವ ವ್ಯಕ್ತಿಗಳ ಜೊತೆ, ಗ್ರಾಮದ ಮುಖ್ಯಸ್ಥರ ಜೊತೆ, ಧಾರ್ಮಿಕ ಮುಖಂಡರ ಜೊತೆ ಹಲವೆಡೆ ಸಭೆ ನಡೆದೇ ಇಲ್ಲ ಎಂದು ಆಯೋಗ ಹೇಳಿದೆ.
ವರದಿಯನ್ನು ಸಿದ್ಧಪಡಿಸಲು ಆಯೋಗವು, ಎಲ್ಲ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರಧಾನ ಕಾರ್ಯದರ್ಶಿಗಳಿಗೆ ಈ ವರ್ಷದ ಮಾರ್ಚ್‌ನಲ್ಲಿ ಪತ್ರ ಬರೆದಿತ್ತು. ಅಲ್ಲದೆ, ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿಗಳು (ಸಿಡಿಪಿಒ), ಮಕ್ಕಳ ಅಭಿವೃದ್ಧಿ ಸಮಿತಿ (ಸಿಡಬ್ಲ್ಯೂಸಿ) ಮಕ್ಕಳ ಅಭಿವೃದ್ಧಿ ಪೊಲೀಸ್ ಅಧಿಕಾರಿಗಳು (ಸಿಡಬ್ಲ್ಯುಪಿಒ), ಅಂಗನವಾಡಿ ಕಾರ್ಯಕರ್ತೆಯರ ಜೊತೆಗೂಡಿ ಬಾಲ್ಯ ವಿವಾಹದ ಕುರಿತು ಜಾಗೃತಿ ಮೂಡಿಸುವಂತೆಯೂ ರಾಜ್ಯಗಳಿಗೆ ಸೂಚನೆ ನೀಡಲಾಗಿತ್ತು.
596 ಜಿಲ್ಲೆಗಳಿಂದ ಮಾತ್ರ ಆಯೋಗಕ್ಕೆ ಅಗತ್ಯ ಮಾಹಿತಿ ದೊರೆತಿದೆ. ಗೋವಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಯಾವ ಜಿಲ್ಲೆಯಿಂದಲೂ ಮಾಹಿತಿ ಸಿಕ್ಕಿಲ್ಲ.