ಲಖನೌ: ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಜಲಾವೃತ ಪ್ರದೇಶದಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದರ್ಭಂಗಾದಿಂದ ಪ್ರವಾಹ ಪೀಡಿತರಿಗೆ ಪರಿಹಾರ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಔರೈ ಬ್ಲಾಕ್‌ನ ಜಲಾವೃತ ಪ್ರದೇಶದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ರಾಕೇಶ್ ಕುಮಾರ್ ಹೇಳಿದ್ದಾರೆ.
'ಹೆಲಿಕಾಪ್ಟರ್‌ನಲ್ಲಿದ್ದ ನಾಲ್ವರು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಅವರಿಗೆ ಯಾವುದೇ ಗಾಯಗಳು ಆಗಿಲ್ಲ. ಆದಾಗ್ಯೂ, ಮುನ್ನೆಚ್ಚರಿಕೆಯಾಗಿ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ' ಎಂದು ಜಿಲ್ಲಾಧಿಕಾರಿ ಸುಬ್ರತ್ ಕುಮಾರ್ ಸೇನ್ ಮಾಹಿತಿ ನೀಡಿದ್ದಾರೆ.
ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಬಿಹಾರ ತತ್ತರಿಸಿ ಹೋಗಿದ್ದು, ರಾಜ್ಯದ ಕೆಲ ಭಾಗಗಳಲ್ಲಿ ಪ್ರವಾಹ ಸಂಭವಿಸಬಹುದು ಎಂದು ಬಿಹಾರ ಸರ್ಕಾರ ಎಚ್ಚರಿಕೆ ನೀಡಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಸುಮಾರು 780.3 ಮಿ.ಮೀ ಮಳೆಯಾಗಿದೆ. ವಾಲ್ಮೀಕಿನಗರ ಮತ್ತು ಬೀರ್‌ಪುರ ಬ್ಯಾರೇಜ್‌ಗಳಿಂದ ನೀರು ಬಿಡುಗಡೆ ಮಾಡಲಾಗಿದೆ.
ಪ್ರವಾಹವು 12 ಜಿಲ್ಲೆಗಳ ಸುಮಾರು 13.5 ಲಕ್ಷ ಜನರ ಮೇಲೆ ಪರಿಣಾಮ ಬೀರಬಹುದು ಎಂದು ರಾಜ್ಯ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಮಾಲ್ ತಿಳಿಸಿದ್ದಾರೆ.