ನವದೆಹಲಿ: ಮಣಿಪುರದಲ್ಲಿ ಉಂಟಾಗಿರುವ ಜನಾಂಗೀಯ ಸಂಘರ್ಷವನ್ನು ಪರಿಹರಿಸಲು ಕೇಂದ್ರ ಗೃಹ ಸಚಿವಾಲಯವು ಮೈತೇಯಿ, ಕುಕಿ ಹಾಗೂ ನಾಗಾ ಸಮುದಾಯಗಳಿಗೆ ಸೇರಿದ ಶಾಸಕರೊಂದಿಗೆ ಮಂಗಳವಾರ ಮಹತ್ವದ ಸಭೆ ನಡೆಸಿತು. ಜನರ ಪ್ರಾಣ ಹಾನಿ ತಡೆಯಲು, ಹಿಂಸಾಚಾರ ಮಾರ್ಗದಿಂದ ದೂರವಿರುವಂತೆ ಎಲ್ಲ ಸಮುದಾಯಗಳಿಗೆ ಮನವಿ ಮಾಡಲು ಒಮ್ಮತದ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
'ಕುಕಿ- ಜೋ- ಹಮಾರ್- ಮೈತೇಯಿ ಹಾಗೂ ನಾಗಾ ಸಮುದಾಯಗಳನ್ನು ಪ್ರತಿನಿಧಿಸುವ ಮಣಿಪುರ ಶಾಸಕರೊಂದಿಗೆ ರಾಜ್ಯದ ಪ್ರಸ್ತುತ ಸನ್ನಿವೇಶವನ್ನು ಚರ್ಚಿಸಲು ನವದೆಹಲಿಯಲ್ಲಿ ಸಭೆ ನಡೆಸಲಾಯಿತು. ಎಲ್ಲ ಸಮುದಾಯಗಳು ಹಿಂಸಾಚಾರದ ಮಾರ್ಗದಿಂದ ದೂರವಿರಬೇಕು. ಇದರಿಂದ ಅಮಾಯಕ ನಾಗರಿಕರ ಅಮೂಲ್ಯ ಜೀವಗಳು ಹಾನಿಯಾಗುವುದಿಲ್ಲ. ಇದಕ್ಕಾಗಿ ರಾಜ್ಯದ ಜನರಿಗೆ ಮನವಿ ಮಾಡಲು ಸಭೆಯು ಸರ್ವಾನುಮತದಿಂದ ನಿರ್ಧರಿಸಿತು' ಎಂದು ಗೃಹ ಸಚಿವಾಲಯ ಹೊರಡಿಸಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಮಣಿಪುರ ವಿಧಾನಸಭೆಯ ಸ್ಪೀಕರ್ ಥೋಕ್‌ಚೋಮ್ ಸತ್ಯವ್ರತ ಸಿಂಗ್ ಹಾಗೂ ಶಾಸಕರಾದ ತೋಂಗ್‌ಬ್ರಂ ರೊಬಿಂದ್ರೊ, ಬಸಂತ್ ಕುಮಾರ್ ಸಿಂಗ್ ಅವರು ಮೈತೇಯಿ ಸಮುದಾಯದ ಪರ ಸಭೆಯಲ್ಲಿ ಭಾಗವಹಿಸಿದ್ದರು. ಕುಕಿ ಸಮುದಾಯದ ಪರ ಶಾಸಕರಾದ ಲೆತ್‌ಪಾವೊ ಹಾವೊಕಿಪ್ ಹಾಗೂ ನೆಮ್ಚಾ ಕಿಪಗೆನ್ ಅವರು ಹಾಜರಿದ್ದರು. ಶಾಸಕರಾದ ರಾಮ್ ಮುಯಿವಾ, ಅವಾಗ್ಬೊ ನ್ಯೂಮೈ ಹಾಗೂ ಎಲ್. ದಿಖೊ ಅವರು ನಾಗಾ ಸಮುದಾಯವನ್ನು ಪ್ರತಿನಿಧಿಸಿದ್ದರು. ಮೈತೇಯಿ ಮತ್ತು ಕುಕಿ ಸಮುದಾಯದ ಸುಮಾರು 20 ಶಾಸಕರು ಮತ್ತು ನಾಗಾ ಸಮುದಾಯದ ಮೂವರು ಶಾಸಕರು ಈ ಸಭೆಯಲ್ಲಿ ಭಾಗವಹಿಸಿದ್ದರು. ಗೃಹ ಸಚಿವ ಅಮಿತ್ ಶಾ ಮತ್ತು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.
ಮಣಿಪುರದಲ್ಲಿ 2023ರ ಮೇನಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಮಣಿಪುರದ ಬುಡಕಟ್ಟು ಸಮುದಾಯಗಳಿಗೆ ಸೇರಿದ 20ಕ್ಕೂ ಹೆಚ್ಚು ಶಾಸಕರು ಮೊದಲ ಬಾರಿಗೆ ಭೇಟಿಯಾಗಿ, ಚರ್ಚಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ.