ಒಟ್ಟಾವ: ಕೆನಡಾದಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದದ ವಿಷಯವನ್ನು ಕೆನಡಾದ ಸಂಸತ್ ಸದಸ್ಯ, ಕರ್ನಾಟಕ ಮೂಲದ ಚಂದ್ರ ಆರ್ಯ ಪ್ರಸ್ತಾಪಿಸಿದ್ದಾರೆ. ಖಾಲಿಸ್ತಾನಿ ಉಗ್ರವಾದದ ತೀವ್ರತೆಯನ್ನು ಬಹಳ ಹಿಂದೆಯೇ ಗುರುತಿಸಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.
ಕೆನಡಾದ ಸಾರ್ವಭೌಮತ್ವವು ಅತ್ಯಂತ ಉನ್ನತವಾದದ್ದು, ಕೆನಡಾ ವಿಷಯದಲ್ಲಿ ವಿದೇಶಿಗರ ಯಾವುದೇ ರೀತಿಯ ಹಸ್ತಕ್ಷೇಪ ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದ್ದಾರೆ.
'ಎರಡು ವಾರಗಳ ಹಿಂದೆ, ಖಾಲಿಸ್ತಾನಿ ಪ್ರತಿಭಟನಾಕಾರರ ಗುಂಪು ನನಗೆ ಅಡ್ಡಪಡಿಸಿದ್ದರಿಂದ ಆರ್‌ಸಿಎಂಪಿ ಅಧಿಕಾರಿಗಳ ರಕ್ಷಣೆ ಪಡೆದು ನಾನು ಎಡ್ಮಂಟನ್‌ನಲ್ಲಿ ಹಿಂದೂ ಕಾರ್ಯಕ್ರಮವೊಂದರಲ್ಲಿ ಸುರಕ್ಷಿತವಾಗಿ ಭಾಗವಹಿಸಲು ಸಾಧ್ಯವಾಯಿತು'ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ಆರ್ಯ ತಿಳಿಸಿದ್ದಾರೆ.
ಕೆನಡಾದಲ್ಲಿ ಖಾಲಿಸ್ತಾನಿ ಉಗ್ರವಾದದ ಗಂಭೀರ ಸಮಸ್ಯೆಯನ್ನು ಬಹಳ ಹಿಂದೆಯೇ ಗುರುತಿಸಿದ್ದೇವೆ ಮತ್ತು ಅನುಭವಿಸಿದ್ದೇವೆ. ನಾನು ಸ್ಪಷ್ಟವಾಗಿ ಹೇಳುತ್ತೇನೆ. ಕೆನಡಾದ ಸಾರ್ವಭೌಮತ್ವದ ಪಾವಿತ್ರ್ಯವು ಉನ್ನತವಾದದ್ದು, ಯಾವುದೇ ರೂಪದಲ್ಲಿ ವಿದೇಶಿಯರ ಹಸ್ತಕ್ಷೇಪವನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ ಎಂದಿದ್ದಾರೆ.
ಖಾಲಿಸ್ತಾನಿ ಹೋರಾಟಗಾರರ ಹಿಂಸಾತ್ಮಕ ಪ್ರತ್ಯೇಕತಾವಾದವು ಕೆನಡಾದಲ್ಲೂ ಕಳವಳಕ್ಕೆ ಕಾರಣವಾಗಿದೆ. ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಈ ಸಮಸ್ಯೆ ಪರಿಹರಿಸಬೇಕು ಎಂದು ಕಾನೂನು ಜಾರಿ ಸಂಸ್ಥೆಗಳಿಗೆ ಆರ್ಯ ಒತ್ತಾಯಿಸಿದ್ದಾರೆ.
ಕೆನಡಾದಲ್ಲಿ ನಡೆದ ಖಾಲಿಸ್ರಾನಿ ಹೋರಾಟಗಾರ ಹರದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಟ್ರುಡೋ ಆರೋಪಿಸಿದ ಬಳಿಕ ಭಾರತ-ಕೆನಡಾ ಸಂಬಂಧ ಹದಗೆಟ್ಟಿದೆ.
ಈ ಆರೋಪವನ್ನು ತಳ್ಳಿಹಾಕಿದ್ದ ಭಾರತ, ಟ್ರುಡೋ ಹೇಳಿಕೆ ಅಸಂಬದ್ಧ ಮತ್ತು ಪ್ರಚೋದಿತ ಎಂದಿತ್ತು. ಅಲ್ಲದೆ, ಕೆನಡಾದಲ್ಲಿ ಉಗ್ರಗಾಮಿಗಳು ಮತ್ತು ಭಾರತ ವಿರೋಧಿ ಶಕ್ತಿಗಳಿಗೆ ನೆಲೆ ಒದಗಿಸಲಾಗಿದೆ ಎಂದು ಕಿಡಿಕಾರಿತ್ತು.
2020ರಲ್ಲಿ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆಯು 'ಭಯೋತ್ಪಾದಕ'ಎಂದು ಗೊತ್ತುಪಡಿಸಿದ ನಿಜ್ಜರ್‌ನನ್ನು ಕಳೆದ ವರ್ಷ ಜೂನ್‌ನಲ್ಲಿ ಸರ್ರೆಯ ಗುರುದ್ವಾರದ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿತ್ತು.