ಕಾಸರಗೋಡು : ವಿವಿಧ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಬಹಳಷ್ಟು ಸಾಧನೆಗಳನ್ನು ಮಾಡುತ್ತಿದ್ದು, ಇಂತಹ ಪ್ರತಿಭೆಗಳನ್ನು ಅನಾವರಣಗೊಳಿಸುವ ಕೆಲಸ ಸಂಘ ಸಂಸ್ಥೆಗಳಿಂದ ನಡೆದುಬರಬೇಕಾಗಿದೆ ಎಂದು ರಂಗನಟಿ ರೂಪಶ್ರೀ ವರ್ಕಾಡಿ ಹೇಳಿದರು.
ಅವರು ರಂಗಚಿನ್ನಾರಿ ಕಾಸರಗೋಡು ಇದರ ಅಂಗ ಸಂಸ್ಥೆ ನಾರಿ ಚಿನ್ನಾರಿ ವತಿಯಿಂದ ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ದಸರಾ ನಾಡಹಬ್ಬದ ಅಂಗವಾಗಿ ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ಆಯೋಜಿಸಲಾದ 'ನವ ವನಿತಾ'ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಂಗಚಿನ್ನಾರಿಯ ಮಹಿಳಾ ಘಟಕ ನಾರಿ ಚಿನ್ನಾರಿಯ ಮೂಲಕ ಕಾಸರಗೋಡಿನ ಎಲೆಮರೆಯ ಪ್ರತಿಭೆಗಳನ್ನು ಗುರುತಿಸಿ ಮುಂಚೂಣಿಗೆ ತರುವ ಕೆಲಸ ನಡೆಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ನಾರಿ ಚಿನ್ನಾರಿ ಕಾರ್ಯಾಧ್ಯಕ್ಷೆ ಸವಿತಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಲಾವಿದೆ ಸುಶೀಲ ಮಾಧವ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು. ನಾರಿ ಚಿನ್ನಾರಿ ಗೌರವಾಧ್ಯಕ್ಷೆ ತಾರಾ ಪ್ರಸಾದ್ ಉಪಸ್ಥಿತರಿದ್ದರು. ಹಿರಿಯ ವೈದ್ಯ ಡಾ. ಬಿ. ಎಸ್. ರಾವ್ ಅವರನ್ನು ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಗೌರವಿಸಿದರು.
ಖ್ಯಾತ ದಂತ ವೈದ್ಯೆ ಡಾ. ರೇಖಾ ಮಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿದಮಾತನಾಡಿ ನಗು ಮತ್ತು ಆತ್ಮ ವಿಶ್ವಾಸ ಪರಸ್ಪರ ಬೆಸೆದುಕೊಂಡಾಗ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗುತ್ತದೆ. ಕಾಸರಗೋಡಿನಲ್ಲಿ ಮಹಿಳೆಯರಿಗಾಗಿಯೇ ಒಂದು ವೇದಿಕೆಯನ್ನು ನಿರ್ಮಾಣ ಮಾಡಿ ಮಹಿಳೆಯರಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ರಂಗ ಚಿನ್ನಾರಿಯ ಮಹಿಳಾ ಘಟಕ ನಾರಿ ಚಿನ್ನಾರಿಯ ಕಾರ್ಯ ಅಭಿನಂದಾನರ್ಹ ಎಂದು ತಿಳಿಸಿದರು.
ರಂಗ ಚಿನ್ನಾರಿಯ ಸಂಚಾಲಕ ಹಾಗೂ ನಿರ್ದೇಶಕ ಕಾಸರಗೋಡು ಚಿನ್ನಾ ಸಮಾರೋಪ ಮಾತುಗಳನ್ನಾಡಿ, ಮಹಿಳೆಯರಿಂದ ಮಹಿಳೆಯರಿಗಾಗಿ ಇರುವ ಈ ವೇದಿಕೆಯನ್ನು ಮತ್ತಷ್ಟು ವಿಸ್ತರಿಸುವ ಯೋಜನೆ ಇದೆ. ಅಲ್ಲದೆ ಸಾಧಕರ ಮನೆಯಲ್ಲಿಯೇ 'ಗೃಹ ಸಲ್ಲಾಪ'ಎಂಬ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು. ರಂಗ ಚಿನ್ನಾರಿಯ ನಿರ್ದೇಶಕರಾದ ಕೆ. ಸತ್ಯನಾರಾಯಣ, ಕೆ. ಸತೀಶ್ಚಂದ್ರ ಭಂಡಾರಿ, ಮನೋಹರ ಶೆಟ್ಟಿ ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಶ್ಯಾನುಭೋಗ್ ಸ್ವಾಗತಿಸಿದರು. ನಾರಿ ಚಿನ್ನಾರಿ ಕಾರ್ಯದರ್ಶಿ ದಿವ್ಯಾ ಗಟ್ಟಿ ಪರಕ್ಕಿಲ ಕಾರ್ಯಕ್ರಮ ನಿರೂಪಿಸಿದರು. ಸರ್ವಮಂಗಳ ವಂದಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಜಯಲಕ್ಷ್ಮೀ, ರಶ್ಮಿ ದೀಪಕ್ ಇವರಿಂದ ನೃತ್ಯ, ಜಯಲಕ್ಷ್ಮೀ ರಾಜೇಶ್, ರಶ್ಮೀ ದೀಪಕ್, ದೇವಿಕಾ, ಕಾವ್ಯ ಪ್ರದೀಪ್ ಇವರಿಂದ ಸಮೂಹ ನೃತ್ಯ, ಶರಣ್ಯಾ ನಾರಾಯಣನ್ ಇವರಿಂದ ಭಾವ ನೃತ್ಯ, ದೇವಿಕಾ ಇವರಿಂದ ಮಲಯಾಳಂ ಹಾಡು, ಡಾ. ಯು. ಮಹೇಶ್ವರಿ ಇವರಿಂದ ಆಶು ಭಾಷಣ ನಿರ್ವಹಣೆ ಹಾಗೂ ನಾರಿ ಚಿನ್ನಾರಿ ಸದಸ್ಯೆಯರಿಂದ ಹುಲಿ ಕುಣಿತ ಪ್ರದರ್ಶನಗೊಂಡಿತು.