ನವದೆಹಲಿ: 2020ರಲ್ಲಿ ಪಂಜಾಬ್‌ನಲ್ಲಿ ನಡೆದಿದ್ದ, ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಲ್ವಿಂದರ್ ಸಿಂಗ್ ಸಂಧು ಕೊಲೆಗೆ ಖಾಲಿಸ್ತಾನ ಲಿಬರೇಷನ್ ಫೋರ್ಸ್ ಸಂಘಟನೆ ಜೊತೆ ನಂಟು ಹೊಂದಿದ್ದ ಕೆನಡಾ ಮೂಲದ ವ್ಯಕ್ತಿ ಸಂಚು ರೂಪಿಸಿದ್ದ ಎಂದು ಸುಪ್ರೀಂ ಕೋರ್ಟ್‌ಗೆ ಎನ್‌ಐಎ ತಿಳಿಸಿದೆ.
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಈ ಮಾಹಿತಿ ಉಲ್ಲೇಖಿಸಿದೆ. ಖಾಲಿಸ್ತಾನ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರವಾಗಿ ಭಾರತ ಮತ್ತು ಕೆನಡಾ ನಡುವಿನ ಜಟಾಪಟಿ ನಡೆಯುತ್ತಿರುವ ಈ ಸಂದರ್ಭದಲ್ಲಿ, ಎನ್‌ಐಎ ಈ ಮಾಹಿತಿ ಬಹಿರಂಗಪಡಿಸಿರುವುದು ಗಮನಾರ್ಹ.
ಪಂಜಾಬ್‌ನ ತರನ್ ತಾರನ್ ಜಿಲ್ಲೆಯ ಭಿಖೀವಿಂಡ್‌ನಲ್ಲಿ 2020ರ ಅಕ್ಟೋಬರ್ 16ರಂದು ಕಾಮ್ರೇಡ್ ಬಲ್ವಿಂದರ್ ಸಿಂಗ್ ಸಂಧು ಅವರನ್ನು ಅವರ ನಿವಾಸ ಹಾಗೂ ಶಾಲೆಯಲ್ಲಿ ಇಬ್ಬರು ಅಪರಿಚತ ವ್ಯಕ್ತಿಗಳೂ ಗುಂಡಿಕ್ಕಿ ಹತ್ಯೆ ಮಾಡಿದ್ದರು.
'ಸುಖ್‌ಮೀತ್ ಪಾಲ್ ಸಿಂಗ್ ಅಲಿಯಾಸ್ ಸುಖ ಭಿಕರಿವಾಲ, ಕೆನಡಾ ಮೂಲದ ಖಾಲಿಸ್ತಾನ ಲಿಬರೇಷನ್ ಫೋರ್ಸ್‌ನ ಸದಸ್ಯ ಸನ್ನಿ ಟೊರಂಟೊ, ಲಖ್ವೀರ್ ಸಿಂಗ್ ಅಲಿಯಾಸ್ ರೋಡೆ ಎಂಬುವವರು ಶಿಕ್ಷಕ ಸಂಧು ಹತ್ಯೆ ಮಾಡುವಂತೆ ಸೂಚಿಸಿದ್ದರು ಎಂಬುದಾಗಿ ಬಂಧಿತ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ' ಎಂದು ಎನ್‌ಐಎ ತನ್ನ ಪ್ರಮಾಣಪತ್ರದಲ್ಲಿ ವಿವರಿಸಿದೆ.
ಲಖ್ವೀರ್ ಸಿಂಗ್, ಉಗ್ರ ಸಂಘಟನೆ ಇಂಟರ್‌ನ್ಯಾಷನಲ್ ಸಿಖ್ ಯೂಥ್ ಫೆಡರೇಷನ್ ಹಾಗೂ ಖಾಲಿಸ್ತಾನ ಲಿಬರೇಷನ್ ಫೋರ್ಸ್‌ನ (ಕೆಎಲ್‌ಎಫ್) ಮುಖ್ಯಸ್ಥ ಜರ್ನೈಲ್ ಸಿಂಗ್ ಭಿಂದ್ರನವಾಲಾ ಸೋದರ ಸಂಬಂಧಿ ಎಂದೂ ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.
ಗೃಹ ಸಚಿವಾಲಯದ ಅಧಿಸೂಚನೆ ಮೇರೆಗೆ, 2021ರ ಜನವರಿ 26ರಂದು ಈ ಪ್ರಕರಣ ಕುರಿತು ಎನ್‌ಐಎ ಮತ್ತೊಮ್ಮೆ ಎಫ್‌ಐಆರ್ ದಾಖಲಿಸಿತ್ತು.
'ಭಾರತದಲ್ಲಿರುವ ಖಾಲಿಸ್ತಾನಿ ವಿರೋಧಿ ವ್ಯಕ್ತಿಗಳನ್ನು ಹತ್ಯೆ ಮಾಡುವ ಸಂಚಿನ ಭಾಗವಾಗಿ ಸನ್ನಿ ಟೊರಂಟೊ ಹಾಗೂ ಲಖ್ವೀರ್ ಸಿಂಗ್ ರೋಡೆ ಕಾಮ್ರೇಡ್ ಸಂಧು ಅವರ ಹತ್ಯೆ ಮಾಡಿದ್ದಾರೆ. ಖಾಲಿಸ್ತಾನಿ ವಿರೋಧಿ ವ್ಯಕ್ತಿಗಳನ್ನು ಕೊಂದು ಹಾಕುವ ಮೂಲಕ ಅದಾಗಲೇ ನಿಷ್ಕ್ರಿಯವಾಗಿರುವ ಖಾಲಿಸ್ತಾನ ಚಳವಳಿಗೆ ಮತ್ತೆ ಮರುಜೀವ ನೀಡಬಹುದು ಎಂಬುದಾಗಿ ಕೆಎಲ್‌ಎಫ್ ನಂಬಿತ್ತು' ಎಂದೂ ಎನ್‌ಐಎ ಹೇಳಿದೆ.
'ಪಂಜಾಬ್‌ನಲ್ಲಿ ಭಯೋತ್ಪಾದನೆ ವಿಪರೀತವಾಗಿದ್ದ ವೇಳೆ, ಅದರ ವಿರುದ್ಧ ಸಂಧು ಭಾರಿ ಹೋರಾಟ ನಡೆಸಿದ್ದರು. ಇದನ್ನು ಪರಿಗಣಿಸಿ 1993ರ ಏಪ್ರಿಲ್ 14ರಂದು ಶೌರ್ಯ ಚಕ್ರ ಪುರಸ್ಕಾರ ನೀಡಲಾಗಿತ್ತು. ಇದೇ ಕಾರಣಕ್ಕೆ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು' ಎಂದೂ ಹೇಳಿದೆ.