ನವದೆಹಲಿ: ನಕ್ಸಲ್ ಪಿಡುಗನ್ನು 2026ರ ಮಾರ್ಚ್ ಗಡುವಿನೊಳಗೆ ನಿರ್ಮೂಲನೆಗೊಳಿಸಲು ನಕ್ಸಲ್ ಬಾಧಿತ ರಾಜ್ಯಗಳಲ್ಲಿ ನಿಯಮಿತವಾಗಿ ಅಭಿವೃದ್ಧಿ ಮತ್ತು ಭದ್ರತಾ ಕ್ರಮಗಳನ್ನು ಪರಿಶೀಲಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನಕ್ಸಲ್ ಬಾಧಿತ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ, ಒಟ್ಟು ಪರಿಸ್ಥಿತಿ ಪರಿಶೀಲಿಸಿದ ಅವರು, 'ನಕ್ಸಲೀಯರ ಅತಿರೇಕವೇ ಬುಡಕಟ್ಟು ವಲಯದ ಅಭಿವೃದ್ಧಿಗೆ ಅತಿದೊಡ್ಡ ತೊಡಕಾಗಿದೆ' ಎಂದು ಅಭಿಪ್ರಾಯಪಟ್ಟರು.
'ನಕ್ಸಲರು ತಮ್ಮ ಅತಿರೇಕದಿಂದಾಗಿ ಬುಡಕಟ್ಟು ಜನರಿಗೆ ಅಭಿವೃದ್ಧಿಯ ಫಲ ಸಿಗದಂತೆ ಮಾಡುತ್ತಿದ್ದಾರೆ. ಮಾನವಹಕ್ಕುಗಳ ಅತಿದೊಡ್ಡ ಉಲ್ಲಂಘಿಸುವವರು ನಕ್ಸಲರೇ ಆಗಿದ್ದಾರೆ' ಎಂದು ಟೀಕಿಸಿದರು.
ಛತ್ತೀಸಗಢದಲ್ಲಿ ಇತ್ತೀಚೆಗೆ 31 ಮಾವೋವಾದಿಗಳ ಹತ್ಯೆಯೇ ಬೆನ್ನಲ್ಲೆ ನಡೆದ ಈ ಸಭೆಯಲ್ಲಿ ನಕ್ಸಲ್ ಪೀಡಿತ ರಾಜ್ಯಗಳಲ್ಲಿ ನಡೆದಿರುವ ಕಾರ್ಯಾಚರಣೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಶೀಲನೆ ಮಾಡಲಾಯಿತು.
ಛತ್ತೀಸಗಢ, ಒಡಿಶಾ, ತೆಲಂಗಾಣ, ಮಹಾರಾಷ್ಟ್ರ, ಜಾರ್ಖಂಡ್, ಬಿಹಾರ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.
ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಆಯಾ ಮುಖ್ಯಮಂತ್ರಿಗಳು ಪ್ರತಿತಿಂಗಳು ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲಿಸಬೇಕು. ಅಂತೆಯೇ, ಆಯಾ ರಾಜ್ಯಗಳ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತಿ 15 ದಿನಕ್ಕೊಮ್ಮೆ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.
ಬಾಧಿತ ಪ್ರದೇಶಗಳಲ್ಲಿ ಭದ್ರತಾ ಪರಿಶೀಲನೆಯ ವೇಳೆ ನಿಯೋಜಿಸಲಾದ ಅರೆಸೇನಾಪಡೆಗಳ ಜೊತೆಗೂ ಆಯಾ ರಾಜ್ಯಗಳ ಡಿಜಿಪಿಗಳು ರಾತ್ರಿ ವಾಸ್ತವ್ಯಹೂಡಬೇಕು. ಇದರಿಂದ ಉತ್ತಮ ಫಲಿತಾಂಶ ಸಿಗಲಿದೆ ಎಂದು ಸಲಹೆ ಮಾಡಿದರು.
'ಬುಡಕಟ್ಟು ಗ್ರಾಮಗಳ ಅಭಿವೃದ್ಧಿಗೆ ನಕ್ಸಲರೇ ಅಡ್ಡಿಯಾಗಿದ್ದಾರೆ. ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್, ಮೊಬೈಲ್ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲು ತೊಡಕಾಗಿದ್ದಾರೆ. ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಗೂ ತಲುಪಲು ಆಗುವಂತೆ ನಕ್ಸಲ್ ಪಿಡುಗು ನಿರ್ಮೂಲನೆ ಆಗಬೇಕಿದೆ. ನಕ್ಸಲ್ ಪಿಡುಗನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು' ಎಂದು ಶಾ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ನಕ್ಸಲ್ ಪಿಡುಗಿನ ಕಾರಣದಿಂದ ಎಂಟು ಕೋಟಿ ಬುಡಕಟ್ಟು ಜನರು ಸೌಲಭ್ಯ ವಂಚಿತರಾಗಿದ್ದಾರೆ. ನಕ್ಸಲರು ಇರಿಸಿರುವ ಸುಧಾರಿತ ಸ್ಪೋಟಕ ಸಾಧನಗಳಿಂದ (ಐಇಡಿ) ಸಾವಿರಾರು ಬುಡಕಟ್ಟು ಜನ ಸತ್ತಿದ್ದಾರೆ. ಇದಕ್ಕಿಂತ ದೊಡ್ಡ ಮಾನವ ಹಕ್ಕುಗಳ ಉಲ್ಲಂಘನೆ ಇನ್ನೊಂದಿಲ್ಲ ಎಂದರು.
ಕಠಿಣ ಕ್ರಮಗಳಿಂದಾಗಿ ನಕ್ಸಲ್ ಚಟುವಟಿಕೆ ಗಣನೀಯವಾಗಿ ತಗ್ಗಿದೆ. ಸಕ್ರಿಯರಾಗಿದ್ದ 14 ಮಂದಿ ಉನ್ನತ ನಕ್ಸಲರನ್ನು ನಿಷ್ಕ್ರಿಯರಾಗಿಸಲಾಗಿದೆ ಎಂದು ಶಾ ಹೇಳಿದರು.