ಕಾಸರಗೋಡು : 'ಕವಿಗೋಷ್ಠಿಗಳು ಮತ್ತು ಕವಿಗಳಿಗೆ ದೊರಕುವ ಪ್ರಶಸ್ತಿಗಳು ಕವಿಗಳಲ್ಲಿರುವ ಸೃಜನಶೀಲತೆಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತವೆ. ಅವರಿಗೆ ಮತ್ತಷ್ಟು ಉತ್ತಮ ಕೃತಿಗಳನ್ನು ಸೃಜಿಸಲು ಇದು ಸ್ಫೂರ್ತಿಯಾಗುತ್ತದೆ' ಎಂದು ಹಿರಿಯ ಸಾಹಿತಿ ವಿ. ಬಿ ಕುಳಮರ್ವ ಹೇಳಿದರು.
ಭಾನುವಾರ ಕಾಸರಗೋಡು ದಸರಾ ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಕನ್ನಡ ಭವನ ಗ್ರಂಥಾಲಯ ಸ್ಥಾಪಕ ಅಧ್ಯಕ್ಷ ಕೆ ವಾಮನ್ ರಾವ್ ಬೇಕಲ್ ಮಾತನಾಡಿ,'ಕಾವ್ಯಾಸಕ್ತೆಯಾದ ದುರ್ಗಾಪರಮೇಶ್ವರಿಯು ಕಾವ್ಯ ಸಾಹಿತ್ಯ ವಿದ್ವಾಂಸರನ್ನು, ಉದಯೋನ್ಮುಖ ಕಾವ್ಯ ಸಾಹಿತಿಗಳನ್ನು ಗೌರವಿಸುವುದರಿಂದ ಪ್ರಸನ್ನಳಾಗುತ್ತಾಳೆ. ಇದರಿಂದ ಎಲ್ಲರಿಗೂ ಆಕೆಯ ಅನುಗ್ರಹ ದೊರೆಯುತ್ತದೆ' ಎಂದು ಹೇಳಿದರು.
ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಅಧ್ಯಕ್ಷ ವಿರಾಜ್ ಅಡೂರು ಪ್ರಾಸ್ತಾವಿಕವಾಗಿ ಮಾತನಾಡಿ, 'ಜಿಲ್ಲೆಯಲ್ಲಿ ದಸರಾ ಸಾಂಸ್ಕøತಿಕೋತ್ಸವವು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಬೇಕು. ನಗರ ಪ್ರದೇಶಕ್ಕೆ ಸೀಮಿತವಾಗಿರದೆ, ಗ್ರಾಮೀಣ ಪ್ರದೇಶದ ಸಂಘಟನೆಗಳು, ಸ್ಥಳೀಯ ಪ್ರತಿಭೆಗಳನ್ನು ಬಳಸಿಕೊಂಡು ಸರಳವಾಗಿಯಾದರೂ ದಸರಾ ಸಾಂಸ್ಕøತಿಕೋತ್ಸವ ಆಚರಿಸಬೇಕು. ಇದರಿಂದ ಶ್ರೀಮಂತ ಸಂಸ್ಕೃತಿಯ ರಕ್ಷಣೆ ಸಾಧ್ಯ' ಎಂದರು.
ಬಳಿಕ ನಡೆದ ಕಾಸರಗೋಡು ದಸರಾ ಭಕ್ತಿಪ್ರಧಾನ ಕವಿಗೋಷ್ಠಿಯಲ್ಲಿ ಮೈಸೂರು, ಶಿವಮೊಗ್ಗ್ಗ, ಮಂಗಳೂರು, ಪುತ್ತೂರು, ವಿಟ್ಲ, ಉಪ್ಪಿನಂಗಡಿ, ಬಂಟ್ವಾಳ, ಮಂಜೇಶ್ವರ, ಕಾಸರಗೋಡು ಸೇರಿದಂತೆ ಕನ್ನಡ ನಾಡಿನ ಕವಿಗಳು ಪಾಲ್ಲೊಂಡಿದ್ದರು.
ವೇದಿಕೆಯಲ್ಲಿ ಜಿಲ್ಲಾ ನಿವೃತ್ತ ವಿದ್ಯಾಧಿಕಾರಿ ಲಲಿತಾ ಲಕ್ಷ್ಮೀ ಕುಳಮರ್ವ ,ವಿಜ್ಡಮ್ ನೆಟ್ವರ್ಕ್ ನಿರ್ವಾಹಕ ಪ್ರಕಾಶ್ಚಂದ್ರ,ಕೆ.ಪಿ, ಬಿ.ಇ.ಎಂ.ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ರಾಜೇಶ್ಚಂದ್ರ, ಕೆ.ಪಿ, ವಿಜ್ಡ್‍ಂ ಸಂಸ್ಥೆಯ ಸಿ.ಇ.ಒ. ಅಭಿಲಾಷ್ ಕ್ಷತ್ರಿಯ, ಸಂಧ್ಯಾರಾಣಿ ಟೀಚರ್, ರಾಜೇಶ್ ಅಣಂಗೂರು ಉಪಸ್ಥಿತರಿದ್ದರು. ಕನ್ನಡ ಭವನದ ಕಾರ್ಯದರ್ಶಿ ವಸಂತ ಕೆರೆಮನೆ ವಂದಿಸಿದರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು.