ನವದೆಹಲಿ: ಹರಿಯಾಣದ ಹಂಗಾಮಿ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಪ್ರಮುಖ ನಾಯಕರನ್ನು ಬುಧವಾರ ಇಲ್ಲಿ ಭೇಟಿ ಮಾಡಿದರು.
ನವದೆಹಲಿ: ಹರಿಯಾಣದ ಹಂಗಾಮಿ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಪ್ರಮುಖ ನಾಯಕರನ್ನು ಬುಧವಾರ ಇಲ್ಲಿ ಭೇಟಿ ಮಾಡಿದರು.
ಬಿಜೆಪಿಯ ನೇತೃತ್ವದಲ್ಲಿ ಸತತವಾಗಿ ಮೂರನೆಯ ಬಾರಿಗೆ ರಚನೆಯಾಗಲಿರುವ ಸರ್ಕಾರದಲ್ಲಿ ಸೈನಿ ಅವರೇ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದೆ.
ಪಕ್ಷವು ಅಧಿಕಾರಕ್ಕೆ ಮರಳಿದಲ್ಲಿ ಸೈನಿ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂಬುದನ್ನು ಬಿಜೆಪಿ ನಾಯಕರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸೂಚ್ಯವಾಗಿ ಹೇಳಿದ್ದರು.
ಪ್ರಧಾನಿ ಹಾಗೂ ಬಿಜೆಪಿಯ ನಾಯಕರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸೈನಿ ಅವರು, ಪಕ್ಷವು ಹರಿಯಾಣದಲ್ಲಿ ಸಾಧಿಸಿರುವ ಜಯಕ್ಕೆ ಮೋದಿ ಅವರ ನೀತಿಗಳು ಕಾರಣ ಎಂದು ಹೇಳಿದರು.
ಸೈನಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದರು.
ಹರಿಯಾಣದಲ್ಲಿ ಕಾಂಗ್ರೆಸ್ ಜಯ ಸಾಧಿಸುತ್ತದೆ ಎಂದು ಚುನಾವಣಾ ತಜ್ಞರು ಘೋಷಿಸಿದ್ದರಾದರೂ, ಸರ್ಕಾರದ ನೀತಿಗಳ ಕಾರಣದಿಂದಾಗಿ ಜನರು ಬಿಜೆಪಿಯಲ್ಲಿ ವಿಶ್ವಾಸ ಇರಿಸುತ್ತಾರೆ ಎಂಬುದನ್ನು ತಾವು ಹೇಳಿದ್ದುದಾಗಿ ಸೈನಿ ತಿಳಿಸಿದರು.
ಇವಿಎಂ ಬಗ್ಗೆ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿರುವ ಕುರಿತ ಪ್ರಶ್ನೆಗೆ ಸೈನಿ ಅವರು, ವಿರೋಧ ಪಕ್ಷವು ಈ ವಿಚಾರವಾಗಿ ಸುಳ್ಳುಗಳ ಪ್ರವಾಹವನ್ನೇ ಹರಿಸುತ್ತಿದೆ ಎಂದು ಉತ್ತರಿಸಿದರು.