ನವದೆಹಲಿ: ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸುವ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರಗಿಟ್ಟು ಅಮಾನಿಸಲಾಗಿದೆ ಎಂದು ಆರೋಪಿಸಿ ವಿಡಿಯೊ ಹಂಚಿಕೊಂಡಿರುವ ಬಿಜೆಪಿ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, 'ಸುಳ್ಳು ಹರಡುವ ಬಿಜೆಪಿಯ ತಂತ್ರಗಾರಿಕೆ ಮತ್ತೊಮ್ಮೆ ಬಯಲಾಗಿದೆ' ಎಂದು ಹೇಳಿದೆ.
ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಬುಧವಾರ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ತಾಯಿ ಸೋನಿಯಾ ಗಾಂಧಿ, ಸಹೋದರ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸಾವಿರಾರು ಕಾರ್ಯಕರ್ತರು ಅವರಿಗೆ ಸಾಥ್ ನೀಡಿದ್ದರು.
ಖರ್ಗೆ ಅವರು ಕೊಠಡಿಯ ಬಾಗಿಲಿನ ಹಿಂದೆ ನಿಂತಿರುವಂತೆ ಕಾಣುವ ವಿಡಿಯೊವೊಂದನ್ನು ಹಂಚಿಕೊಂಡಿರುವ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್, ದಲಿತ ನಾಯಕ ಖರ್ಗೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದರು.
'ಕುಟುಂಬದವರಲ್ಲದ ಕಾರಣ ಖರ್ಗೆ ಅವರನ್ನು ಹೊರಗಿಡಲಾಗಿದೆ. ಸೋನಿಯಾ ಕುಟುಂಬದ ಅಹಂಕಾರದ ಎದುರು ಸ್ವಾಭಿಮಾನ ಮತ್ತು ಘನತೆ ಬಲಿಯಾಗಿದೆ' ಎಂದೂ ಹೇಳಿದ್ದರು.
ಇದೇ ವಿಡಿಯೊವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೇರಿದಂತೆ ಹಲವು ಬಿಜೆಪಿ ನಾಯಕರೂ ಹಂಚಿಕೊಂಡಿದ್ದರು.
ಈ ವಿಡಿಯೊ ಕುರಿತು ಎಕ್ಸ್‌ನಲ್ಲಿ ಸ್ಪಷ್ಟನೆ ನೀಡಿರುವ ಕಾಂಗ್ರೆಸ್, ನಕಲಿ ವಿಡಿಯೊವನ್ನು ಬಿಜೆಪಿ ಹಂಚಿಕೊಂಡಿದೆ ಎಂದು ಹೇಳಿದೆ.
ನಾಮಪತ್ರ ಸಲ್ಲಿಕೆ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಿಯಾಂಕಾ ಗಾಂಧಿ ಅವರ ಪಕ್ಕದಲ್ಲೇ ಕುಳಿತಿರುವುದು ಹಲವು ಚಿತ್ರಗಳಲ್ಲಿ ಕಂಡುಬಂದಿದೆ.