HEALTH TIPS

ಕಾಸರಗೋಡು ಕೋಟೆಕಣಿ ರಸ್ತೆ ಶಿಥಿಲ-ವಾಹನ ಸಂಚಾರ ದುಸ್ತರ: ನಗರಸಭೆಯ ನಿರ್ಲಕ್ಷ್ಯ ಧೋರಣೆಗೆ ಚಾಲಕರ ಅಸಮದಾನ

ಕಾಸರಗೋಡು: ನಗರದ ಅತ್ಯಂತ ವಾಹನ ದಟ್ಟಣೆಯಿಂದ ಕೂಡಿದ ಹೊಸಬಸ್‍ನಿಲ್ದಾಣದಿಂದ ಕೋಟೆಕಣಿಗೆ ತೆರಳುವ ರಸ್ತೆ ಸಂಪೂರ್ಣ ಶಿಥಿಲಗೊಂಡಿದೆ. ಅಲ್ಲಲ್ಲಿ ಕುಸಿದಿರುವುದರಿಂದ ವಾಹನ ಸಂಚಾರದೊಂದಿಗೆ ಪಾದಚಾರಿಗಳ ಸಂಚಾರಕ್ಕೂ ತೊಡಕುಂಟಾಗುತ್ತಿದೆ.

ಮಳೆನೀರು ಹರಿಯಲು ನಿರ್ಮಿಸಲಾಗಿರುವ ಒಳಚರಂಡಿ ಅಲ್ಲಲ್ಲಿ ಕುಸಿದು ಹಾನಿಗೀಡಾಗಿದೆ. ಚರಂಡಿಗೆ ಅಳವಡಿಸಿದ್ದ ಸ್ಲ್ಯಾಬ್‍ಗಳು ಕುಸಿದ ಪರಿಣಾಮ ವಾಹನಗಳ ಚಕ್ರ ಇದರೊಳಗೆ ಸಿಲುಕಿ ನಿರಂತರವಾಗಿ ಸಂಚಾರಕ್ಕೂ ತಡೆಯುಂಟಾಗುತ್ತಿದೆ. ಪಾದಚಾರಿಗಳ ಕಾಲುಗಳೂ ಸ್ಲ್ಯಾಬ್ ಸಂದಿಯಲ್ಲಿ ಸಿಲುಕಿ ಸಂಕಷ್ಟ ಎದುರಿಸಬೇಕಾಗುತ್ತಿದೆ. ಅಗಲಕಿರಿದಾದ ರಸ್ತೆ ಇದಾಗಿದ್ದು, ಒಳಚರಂಡಿ ವ್ಯವಸ್ಥೆಯೂ ಅಸ್ತವ್ಯಸ್ತಗೊಂಡಿದೆ. ಎರಡು ವಾಹನಗಳು ಮುಖಾಮುಖಿಯಾದಲ್ಲಿ ಚಾಲಕರು ಹರಸಾಹಸದಿಂದ ವಾಹನ ಚಲಾಯಿಸಬೇಕಾಗುತ್ತಿದೆ. ಇದು ಟ್ರಾಫಿಕ್ ಜಾಮ್‍ಗೂ ಕಾರಣವಾಗುತ್ತಿದೆ. ರಾಮನಾಥ ಕ್ಷೇತ್ರ, ಇಗರ್ಜಿ, ಆಸ್ಪತ್ರೆ, ಸಭಾಂಗಣ ಸೇರಿದಂತೆ ನಾನಾ ಸಂಸ್ಥೆಗಳು ಇಲ್ಲಿ ಕಾರ್ಯಾಚರಿಸುತ್ತಿರುವುದರಿಂದ ಪ್ರಸಕ್ತ ರಸ್ತೆಯನ್ನು ಅಭಿವೃದ್ಧಿಪಡಿಸಲು ನಗರಸಭೆ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ. ಕಾಸರಗೋಡು ಹೊಸ ಬಸ್ ನಿಲ್ದಾಣದಿಂದ ಕೋಟೆಕಣಿ ಹಾದಿಯಾಗಿ ಸಂಚರಿಸುವ ಈ ರಸ್ತೆ ಕರಂದಕ್ಕಾಡಿನಿಂದ ಮಧೂರು ಸಂಚರಿಸುವ ರಸ್ತೆಗೆ ಸಂಪರ್ಕ ಕಲ್ಪಿಸುತ್ತಿರುವುದರಿಂದ ಸೂರ್ಲು, ಮನ್ನಿಪ್ಪಾಡಿ, ಕೂಡ್ಲು ಪ್ರದೇಶಕ್ಕೆ ತೆರಳುವವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಕಾಸರಗೋಡು ನಗರಸಭೆಯ ಏಳನೇ ವಾರ್ಡಿನ ಈ ರಸ್ತೆ ಇಂದು ಸಂಪೂರ್ಣ ಹಾಳಾಗಿದೆ. ಒಂದೆಡೆ ಅಗಲಕಿರಿದಾದ ರಸ್ತೆ, ಇನ್ನೊಂದೆಡೆ ರಸ್ತೆ ಅಂಚಿಗೆ ಅಳವಡಿಸಿರುವ ವಿದ್ಯುತ್ ಕಂಬಗಳಿಂದ ವಾಹನ ಚಾಲಕರ ಪಾಲಿಗೆ ಮತ್ತಷ್ಟು ಸಂಕಷ್ಟ ಎದುರಾಗುತ್ತಿದೆ. ರಸ್ತೆ ಅಂಚಿಗೆ ಅಳವಡಿಸಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ಸೂಕ್ತ ಒಳಚರಂಡಿಯೊಂದಿಗೆ ರಸ್ತೆ ನಿರ್ಮಿಸಿಕೊಡುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ. ಪ್ರಸಕ್ತ ರಸ್ತೆಯ ಬಹುತೇಕ ಕಟ್ಟಡಗಳು ರಸ್ತೆ ಅಂಚಿನಲ್ಲಿದ್ದು, ರಸ್ತೆ ವಿಸ್ತರಣೆಗೂ ತೊಡಕಾಗುತ್ತಿದೆ.  ರಸ್ತೆ ಒಳಚರಂಡಿ ಸರಿಪಡಿಸುವುದರ ಜತೆಗೆ,  ರಸ್ತೆ ಅಂಚಿಗೆ ಅಳವಡಿಸಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ಅಲ್ಪ ದೂರ ಅಳವಡಿಸಲು ಕ್ರಮ ಕೈಗೊಳ್ಳುವುದರಿಂದ ರಸ್ತೆಯಲ್ಲಿನ ವಾಹನಗಳ ದಟ್ಟಣೆ ಪರಿಹರಿಸಿಕೊಳ್ಳಲು ಸಾಧ್ಯ ಎಂಬುದಾಗಿ ಚಾಲಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



ಅಭಿಮತ: ನಗರದ ಕೋಟೆಕಣಿ ರಸ್ತೆ ಅಭಿವೃದ್ಧಿ ಬಗ್ಗೆ ನಗರಸಭಾ ಸಭೆಯಲ್ಲಿ ನಿರಂತರ ಧ್ವನಿಯೆತ್ತುತ್ತಾ ಬಂದಿದ್ದು, ನಗರಸಭಾ ಆಡಳಿತದ ನಿರ್ಲಕ್ಷ್ಯ ಧೋರಣೆಯಿಂದ ರಸ್ತೆಗೆ ಶಾಶ್ವತ ಪರಿಹಾರ ಕಾಣಲಾಗಿಲ್ಲ. ಪ್ರಸಕ್ತ ಆರು ಲಕ್ಷ ರೂ. ಮೊತ್ತ ದುರಸ್ತಿಗಾಗಿ ಮೀಸಲಿರಿಸಲಾಗಿದ್ದು, ಎರಡು ವಾರದೊಳಗೆ ಟೆಂಡರ್‍ಪ್ರಕ್ರಿಯೆ ಪೂರ್ತಿಗೊಂಡು ಕಾಮಗಾರಿ ನಡೆಯಲಿದೆ. ಮುಂದೆ ಕೆಡಿಪಿ ಮೊತ್ತ ಲಭ್ಯವಾಗಿಸಿ, ಒಳಚರಂಡಿ ಹಾಗೂ ರಸ್ತೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಇದಕ್ಕಾಗಿ ಶಾಸಕರ ಸಹಕಾರವನ್ನೂ ಯಾಚಿಸಲಾಗುವುದು.

                                                    ವರಪ್ರಸಾದ್ ಕೊಟೆಕಣಿ, ನಗರಸಭಾ ಸದಸ್ಯ

                                                                ಕಾಸರಗೋಡು ನಗರಸಭೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries