ಕುಂಬಳೆ:ಕ.ಸಾ.ಪ.ಗಡಿನಾಡ ಘಟಕದ ಮಾಜಿ ಅಧ್ಯಕ್ಷೆ ದಿ.ಡಾ.ಲಲಿತಾ ಎಸ್.ಎನ್.ಭಟ್ ವೈದ್ಯಯಾಗಿ, ಸಮಾಜ ಸೇವಕಿಯಾಗಿ, ಸಂಘಟಕಿಯಾಗಿ ಅಪ್ರತಿಮ ಸೇವೆಗೈದವರು. ಸಾಹಿತ್ಯ ರಚನೆ, ಪುಸ್ತಕ ಪ್ರಕಾಶನ ಅನುವಾದ ಹಾಗೂ ಸೇವಾ ತತ್ಪರತೆಯಿಂದ ಅವರು ಅಕ್ಷರಶಃ ಮೇರು ವ್ಯಕ್ತಿತ್ವದ ಅಪ್ರತಿಮ ಸಾಧಕಿಯಾಗಿದ್ದವರು ಎಂದು ನ್ಯಾಯವಾದಿ, ಲೇಖಕ ಥಾಮಸ್ ಡಿ’ಸೋಜಾ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ಕ.ಸಾ.ಪ.ಮಾಜಿ ಅಧ್ಯಕ್ಷೆ, ಕನ್ನಡ ಹೋರಾಟಗಾರ್ತಿ ದಿ.ಡಾ.ಲಲಿತಾ ಎಸ್.ಎನ್.ಭಟ್ ಅವರಿಗೆ ಸೀತಾಂಗೋಳಿಯ ತಮ್ಮ ಕಾರ್ಯಾಲಯದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಸ್ಮರಣಾ ನುಡಿಗಳಲ್ಲಿ ಬದುಕು-ಸಾಧನೆಗಳ ಬಗ್ಗೆ ಮಾತನಾಡಿದರು.
ದಶಕಗಳ ಹಿಂದೆ ಕನ್ನಡದ ಪ್ರಮುಖ ನಿಯತಕಾಲಿಕ ಸಹಿತ ವಿವಿಧ ಪ್ರಕಟಣೆಗಳಲ್ಲಿ ನಿರಂತರ ತಮ್ಮ ಬರಹಗಳ ಮೂಲಕ ಜನಮನ್ನಣೆ ಗಳಿಸಿದ್ದರು.ಅವರ ಅಪರಾಜಿತ ಕೃತಿ ಮಲೆಯಾಳಂ ಮತ್ತು ತೆಲುಗಿಗೆ ಅನುವಾದಗೊಂಡಿತ್ತು. ಕಸಾಪ ಅಧ್ಯಕ್ಷರಾಗಿದ್ದ ಎರಡೂ ಅವಧಿಯಲ್ಲಿ ಕನ್ನಡ ನಂದಾದೀಪ, ಮನೆ-ಮನೆ ಕನ್ನಡ ಅಭಿಯಾನಗಳ ಮೂಲಕ ಗಡಿನಾಡಿನ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿಗಳ ಪುನರುತ್ಥಾನಕ್ಕೆ ಅಪೂರ್ವ ಸೇವೆ ಸಲ್ಲಿಸಿದ್ದರು. ವೈದ್ಯಕೀಯ ಹಾಗೂ ಬಡವರ ಬಗೆಗಿನ ಕಾಳಜಿ ಎಂದಿಗೂ ಪ್ರೇರಣದಾಯಿ ಎಂದವರು ನೆನಪಿಸಿದರು.
ಕಸಾಪ ಕೇರಳ ಗಡಿನಾಡ ಘಟಕದ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಸೇವೆಯೊಂದಿಗೆ ಜನಸೇವೆಯನ್ನೂ ಮಾಡಿದ್ದ ಡಾ.ಲಲಿತಾ ಎಸ್.ಎನ್ ಭಟ್ ತಮ್ಮ ಸೇವಾ ಕಾರ್ಯಗಳು, ಕನ್ನಡ ಚಟುವಟಿಕೆಗಳ ಮೂಲಕ ಜನಾರ್ದನ ಸೇವೆಯನ್ನು ಕಂಡು ಕೃತಾರ್ಥರಾದವರು.ಕೈಗೆತ್ತಿಕೊಳ್ಳುವ ಪ್ರತಿಯೊಂದು ಚಟುವಟಿಕೆಗಳಲ್ಲೂ ಪೂರ್ಣ ತೊಡಗಿಸಿಕೊಳ್ಳುವಿಕೆ, ಸಹವರ್ತಿಗಳೊಳಡನೆ ಅವರ ಬಾಂಧವ್ಯ ಅನುಸರಣೀಯ ಎಂದರು.
ಹಿರಿಯ ಸಾಹಿತಿ ಬಾಲ ಮಧುರಕಾನನ ಅವರು ಗೌರವ ಉಪಸ್ಥಿತರಿದ್ದು ಮಾತನಾಡಿ, ಲಲಿತಾ ಎಸ್ ಎನ್ ಭಟ್ ಅವರ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿ, ಸ್ವರಚಿತ ಕವನವೊಂದನ್ನು ವಾಚಿಸುತ್ತಾ ‘ಕನ್ನಡದ ಕೆಲಸಕ್ಕೆ ಅಲಸದೆಯೆ ದುಡಿದವರು, ಚಿನ್ನದಂತಹ ಮನಸ ಹೊಂದಿದವರು, ಬಣ್ಣನೆಗೆ ನಿಲುಕದಿಹ ರೀತಿಯಲಿ ಕಾರ್ಯಗಳ ತಣ್ಣನೆಯೆ ಗೈದವರು, ತಾಯಿಯಂತವರು’ ಎಂಬ ಗೆರೆಗಳ ಮೂಲಕ ಅವರ ಬದುಕಿನ ಪಥಗಳನ್ನು ಬಣ್ಣಿಸಿದರು.
ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕಾಧ್ಯಕ್ಷ ಟಿ.ಶಂಕರನಾರಾಯಣ ಭಟ್, ಹಿರಿಯ ನಾಗರಿಕರ ವೇದಿಕೆಯ ವಲಯಾಧ್ಯಕ್ಷ ಈಶ್ವರ ಭಟ್ ಪೆರ್ಮುಖ ಉಪಸ್ಥಿತರಿದ್ದು ಮಾತನಾಡಿದರು. ವಿದ್ಯಾಲಕ್ಷಿ ಮಠದಮೂಲೆ ಉಪಸ್ಥಿತರಿದ್ದರು.
ಕಸಾಪ ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ನಿರೂಪಿಸಿದರು.ಗೌರವ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಬೇಳ ವಂದಿಸಿದರು.