ನಾಗ್ಪುರ: ಗೆಳತಿಯನ್ನು ಕೊಲೆ ಮಾಡಿ, ಮೃತದೇಹವನ್ನು ಮಣ್ಣಿನಲ್ಲಿ ಹೂತು ಹಾಕಿದ ಆರೋಪದ ಅಡಿಯಲ್ಲಿ ನಾಗ್ಪುರ ಪೊಲೀಸರು ಯೋಧರೊಬ್ಬರನ್ನು ಬಂಧಿಸಿದ್ದಾರೆ. 'ದೃಶ್ಯಂ' ಸಿನಿಮಾವನ್ನೇ ಹೋಲುವಂತೆ ಅಪರಾಧ ಕೃತ್ಯ ಎಸಗಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆ.28ರಂದು 32 ವರ್ಷದ ಸಂತ್ರಸ್ತೆ ಕಣ್ಮರೆಯಾದ ಕುರಿತಂತೆ ತನಿಖೆ ಆರಂಭಿಸಿದ ಪೊಲೀಸರಿಗೆ ಭಯಾನಕ ಅಪರಾಧ ಕೃತ್ಯವೊಂದು ನಡೆದಿರುವುದು ಬೆಳಕಿಗೆ ಬಂದಿದೆ.
'ಆರೋಪಿಯು ಅತ್ಯಂತ ಸೂಕ್ಷ್ಮವಾಗಿ ಯೋಜಿಸಿ, ಕೊಲೆಗೈದಿದ್ದಾನೆ. ಈ ಪ್ರಕರಣವು 'ದೃಶ್ಯಂ' ಸಿನಿಮಾವನ್ನೇ ಹೋಲುತ್ತದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ನಾಗಾಲ್ಯಾಂಡ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಗ್ಪುರದ ಕೈಲಾಸ್ ನಗರ ಪ್ರದೇಶದ ನಿವಾಸಿ ಅಜಯ್ ವಾಖೆಂಡೆ (33) ಬಂಧಿತ ಆರೋಪಿ.
ಪ್ರಣಯಕ್ಕೆ ತಿರುಗಿದ ಪರಿಚಯ: 'ಆಟೊಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವಿಚ್ಛೇದಿತ ಜ್ಯೋತ್ಸ್ನಾ ಆಕರೆ ಹಾಗೂ ಅಜಯ್ ವಾಖೆಂಡೆ ಅವರು 'ಮ್ಯಾಟ್ರಿಮೋನಿ' ವೆಬ್‌ಸೈಟ್ ಮೂಲಕ ಪರಿಚಿತರಾಗಿದ್ದರು. ಇಬ್ಬರ ನಡುವೆ ಸ್ನೇಹ ಬೆಳೆದು, ನಂತರ ಪ್ರೀತಿಗೆ ತಿರುಗಿತ್ತು. ಆದರೆ, ಈ ಸಂಬಂಧಕ್ಕೆ ವಾಖೆಂಡೆ ಕುಟುಂಬದಿಂದ ವಿರೋಧ ವ್ಯಕ್ತವಾಗಿತ್ತು. ಬೇರೆ ಯುವತಿ ಜತೆಗೆ ಮದುವೆಯಾಗುವಂತೆ ಒತ್ತಾಯಿಸಿದ್ದರು. ಇದಾದ ಬಳಿಕ ವಾಖೆಂಡೆ ಅಂತರ ಕಾಯ್ದುಕೊಂಡಿದ್ದರು. ಅವಳಿಂದ ಬಿಡಿಸಿಕೊಳ್ಳಲು ಕೊಲೆಗೆ ಯೋಜನೆ ರೂಪಿಸಿದ್ದರು' ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಹುಡುಕಾಟ- ಕೊಲೆಯಲ್ಲಿ ಅಂತ್ಯ: ಗೆಳತಿ ನಿರಂತರವಾಗಿ ದೂರವಾಣಿ ಕರೆ ಮಾಡಿದರೂ ವಾಖೆಂಡೆ ಉತ್ತರಿಸುತ್ತಿರಲಿಲ್ಲ. ಆತನ ಆತ್ಮೀಯ ಸ್ನೇಹಿತರ ಮುಖಾಂತರ ಹುಡುಕಾಡಿದ್ದ ಗೆಳತಿಯು ಆತ ಇರುವ ಸ್ಥಳವನ್ನು ಪತ್ತೆಹಚ್ಚಿದ್ದರು. ಸ್ನೇಹಿತರು ಕೂಡ ಆತನನ್ನು ಗೆಳತಿ ಹುಡುಕುತ್ತಿರುವ ಕುರಿತು ವಾಖೆಂಡೆಗೆ ವಿಷಯ ತಿಳಿಸಿದ್ದರು.
ಈ ಬೆಳವಣಿಗೆ ಬಳಿಕ, ತನ್ನ ತಾಯಿಯ ಮೊಬೈಲ್‌ನಿಂದ ಆಕರೆಗೆ ಕರೆ ಮಾಡಿದ್ದ ವಾಖೆಂಡೆ, ಆ. 28ರಂದು ವಾರ್ಧಾ ರಸ್ತೆಯಲ್ಲಿ ಭೇಟಿಯಾಗುವಂತೆ ತಿಳಿಸಿದ್ದರು. ಆಕರೆ ಅವರು ನಿಗದಿಯಂತೆ ವಾಖೆಂಡೆಯನ್ನು ಭೇಟಿಯಾಗಿದ್ದರು.
ಕತ್ತು ಹಿಸುಕಿ ಕೊಲೆ: 'ಭೇಟಿಯ ಬಳಿಕ ಇಬ್ಬರು ಹೋಟೆಲ್‌ಗೆ ತೆರಳಿದ್ದರು. ಅಲ್ಲಿ ಸ್ವಲ್ಪ ಹೊತ್ತು ಉಳಿದು ಇಬ್ಬರು ಕೂಡ ಅಲ್ಲಿಂದ ಟೋಲ್ ಪ್ಲಾಜಾದತ್ತ ತೆರಳಿದ್ದರು. ದಾರಿ ಮಧ್ಯದಲ್ಲಿ ಗೆಳತಿಗೆ ನಿದ್ದೆ ಮಾತ್ರೆ ಬೆರೆಸಿದ್ದ ಪಾನೀಯವನ್ನು ವಾಖೆಂಡೆ ನೀಡಿದ್ದರು. ಕೆಲ ಹೊತ್ತಿನಲ್ಲಿ ಗೆಳತಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದನ್ನು ಖಚಿತಪಡಿಸಿಕೊಂಡು ಕತ್ತುಹಿಸುಕಿ ಕೊಲೆ ಮಾಡಿದ್ದರು. ಅಲ್ಲಿಂದ ಮೃತದೇಹವನ್ನು ನಿರ್ಜನ ಸ್ಥಳಕ್ಕೆ ಕೊಂಡೊಯ್ದು, ರಾತ್ರಿಯೇ ಗುಂಡಿ ತೆಗೆದು ಅಲ್ಲಿ ಮೃತದೇಹವನ್ನೂ ಹೂತು, ಸಿಮೆಂಟ್‌ನಿಂದ ಅದನ್ನು ಮುಚ್ಚಿದ್ದರು. ಗೆಳತಿಯ ಮೊಬೈಲ್ ಅನ್ನು ವಾರ್ಧಾ ರಸ್ತೆಯಲ್ಲಿ ಸಾಗುತ್ತಿದ್ದ ಟ್ರಕ್‌ಗೆ ಎಸೆದಿದ್ದರು' ಎಂದು ಪೊಲೀಸರು ತಿಳಿಸಿದರು.
ಮರುದಿನ ಆಕರೆ ಮನೆಗೆ ಬಾರದ ಕಾರಣ, ಕುಟುಂಬಸ್ಥರು ಆ.29ರಂದು ಬೆಲತ್‌ರೋಡಿ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ ಬಳಿಕ ಸೆ.17ರಂದು ಅಪಹರಣ ಪ್ರಕರಣವನ್ನೂ ದಾಖಲಿಸಿದ್ದರು.
ತನಿಖೆ ಆರಂಭಿಸಿದ ಪೊಲೀಸರಿಗೆ ಅಜಯ್ ವಾಖೆಂಡೆ ಹಾಗೂ ಜ್ಯೋತ್ಸ್ನಾ ಆಕರೆ ನಿರಂತರ ದೂರವಾಣಿ ಸಂಭಾಷಣೆ ನಡೆಸಿದ್ದು ಕಂಡುಬಂದಿದೆ. ಹೆಚ್ಚಿನ ವಿಚಾರಣೆಗಾಗಿ ಹಾಜರಾಗುವಂತೆ ಸಮನ್ಸ್ ನೀಡಿದರು. ಠಾಣೆಯಲ್ಲಿ ಪೊಲೀಸರು ಪ‍್ರಶ್ನಿಸುತ್ತಿದ್ದಂತೆಯೇ, ಹೆಚ್ಚಿನ ರಕ್ತದ ಒತ್ತಡವಿದೆ ಎಂದು ಪುಣೆಯ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದರು. ಈ ಮಧ್ಯೆ, ನಾಗ್ಪುರ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ತಿರಸ್ಕೃತಗೊಂಡಿತ್ತು. ಬಳಿಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರೂ ಕೂಡ ಸೆ.15ರಂದು ಅಲ್ಲಿ ಕೂಡ ಅರ್ಜಿ ತಿರಸ್ಕೃತಗೊಂಡಿತ್ತು.
ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡಿರುವುದನ್ನು ಖಚಿತಪಡಿಸಿಕೊಂಡ ಬೆಲತ್‌ರೋಡಿ ಪೊಲೀಸರು ವಾಖೆಂಡೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಗೆಳತಿಯನ್ನು ಕೊಲೆಗೈದಿರುವುದನ್ನು ಒಪ್ಪಿದ್ದಾರೆ.
ಆರೋಪಿ ನೀಡಿದ ಮಾಹಿತಿಯಂತೆ, ವಾರ್ಧಾ ರಸ್ತೆಯ ಡೋಗರ್‌ಗಾಂವ್ ಟೋಲ್ ಕೇಂದ್ರದ ನಿರ್ಜನ ಪ್ರದೇಶಕ್ಕೆ ಸೋಮವಾರ ವಿಧಿವಿಜ್ಞಾನ ತಂಡದ ಜತೆಗೆ ತೆರಳಿದ್ದ ಪೊಲೀಸರು ಮೃತದೇಹದ ಭಾಗಗಳನ್ನು ಹೊರತೆಗೆದರು.