ಕಾಸರಗೋಡು: ಚಂದ್ರಗಿರಿ ರಸ್ತೆ ನಿರ್ವಹಣೆಯಲ್ಲಿ ನಡೆದಿರುವ ಭ್ರಷ್ಟಾಚಾರದ ತನಿಖೆ ನಡೆಸುವುದರೊಂದಿಗೆ ದುರಸ್ತಿ ಕಾಮಗಾರಿ ನಡೆಸಿದ ಗುತ್ತಿಗೆದಾರರ ವಿರುದ್ಧ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ವಿಜಿಲೆನ್ಸ್ ತನಿಖೆ ನಡೆಸುವಂತೆ ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಕಾಸರಗೋಡು ಪ್ರಾದೇಶಿಕ ಸಮಿತಿ ನೇತೃತ್ವದಲ್ಲಿ ಪಿಡಬ್ಲ್ಯೂಡಿ ಕಚೇರಿಗೆ ಪ್ರತಿಭಟನ ಮೆರವಣಿಗೆ ಧರಣಿ ನಡೆಸಿತು.
ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಬಾಬು ಧರಣಿ ಉದ್ಘಾಟಿಸಿ ಮಾತನಾಡಿ, ಚಂದ್ರಗಿರಿ ಪಿಡಬ್ಲ್ಯುಡಿ ರಸ್ತೆಯ ಭ್ರಷ್ಟಾಚಾರವನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಹಾಗೂ ಶೀಥಿಲಗೊಂಡ ರಸ್ತೆಯನ್ನು ತಕ್ಷಣ ದುರಸ್ತಿ ನಡೆಸಬೇಕು ತಪ್ಪಿದಲ್ಲಿ ಬಿಎಂಎಸ್ ವತಿಯಿಂದ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಬಿಎಂಎಸ್ ಕಾಸರಗೋಡು ಪ್ರಾದೇಶಿಕ ಸಮಿತಿ ಅಧ್ಯಕ್ಷ ಬಾಲಕೃಷ್ಣ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು.
ಆಟೋರಿಕ್ಷಾ ಮಜ್ದೂರ್ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಶೆಟ್ಟಿ, ಬಿಎಂಎಸ್ ಜಿಲ್ಲಾ ಸಮಿತಿ ಸದಸ್ಯ ಎ.ಕೇಶವ, ಬಿಎಂಎಸ್ ಜಿಲ್ಲಾ ಜತೆ ಕಾರ್ಯದರ್ಶಿಗಳಾದ ಹರೀಶ್ ಕುದ್ರೆಪ್ಪಾಡಿ, ಗುರುದಾಸ್ ಮಾಡೂರು, ಆಟೊರಿಕ್ಷಾ ಮಜ್ದೂರ್ ಸಂಘದ ಪ್ರಾದೇಶಿಕ ಅಧ್ಯಕ್ಷ ಎಸ್ ಕೆ ಉಮೇಶ್, ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ ನಾಯರ್, ಪುಷ್ಪರಾಜ್ ಕೊರಕ್ಕೋಡು, ಮೋಹನ್ ದಾಸ್ ಕೊರಕ್ಕೋಡು, ಪ್ರಸಾದ್ ವಳಪ್ಪೋತ್, ಸದಾಶಿವ ಪಾಂಡುರಂಗ, ಹರಿ ದಾಸನ್, ಮನೋಹರ ಪಾಂಡು ರಂಗ ಉಪಸ್ಥಿತರಿದ್ದರು. ಬಿಎಂಎಸ್ ಕಾಸರಗೋಡು ಪ್ರಾದೇಶಿಕ ಕಾರ್ಯದರ್ಶಿ ರಿಜೇಶ್ ಜೆ.ಪಿ.ನಗರ ಸ್ವಾಗತಿಸಿದರು. ಬಾಬುಮೋನ್ ಚೆರ್ಕಳ ವಂದಿಸಿದರು.