ನವದೆಹಲಿ: 'ಉಡುಗೊರೆಯಾಗಿ ನೀಡಿದ ಆಸ್ತಿಗೆ ಸಂಬಂಧಿತ ದಾಖಲೆಯಲ್ಲಿ ಸ್ಪಷ್ಟ ಉಲ್ಲೇಖ ಇಲ್ಲದಿದ್ದರೆ, ಅದನ್ನು ಸಹಜವಾಗಿ ಹಿಂಪಡೆಯಲು ಸಾಧ್ಯವಿಲ್ಲ' ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಉಜ್ಜಲ್ ಭುಯನ್ ಅವರಿದ್ದ ಪೀಠವು ಪ್ರಕರಣವೊಂದರ ವಿಚಾರಣೆ ನಡೆಸಿ ಅ. 24ರಂದು ತೀರ್ಪು ನೀಡಿದೆ. ಆಸ್ತಿಗಳ ವರ್ಗಾವಣೆ ಕಾಯ್ದೆ 1882ರ ಸೆಕ್ಷನ್ 126 ಅನ್ನು ಉಲ್ಲೇಖಿಸಿದೆ.
ಉಡುಗೊರೆ ಕೊಟ್ಟವರು ಅಥವಾ ಪಡೆದವರು ಪರಸ್ಪರ ಒಪ್ಪಿದಲ್ಲಿ, ನಿರ್ದಿಷ್ಟ ಸಂದರ್ಭಗಳಿಗೆ ಅನುಸಾರ ಹಿಂಪಡೆಯಬಹುದು ಎಂದು ಉಲ್ಲೇಖಿಸಿದ್ದಲ್ಲಿ ಮಾತ್ರ ರದ್ದುಪಡಿಸಬಹುದು. ಇಂತಹ ಸಂದರ್ಭದಲ್ಲಿ ದಾನಿಗಳ ಮರಣಪೂರ್ವ ಪತ್ರವನ್ನು ಅವಲಂಬಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಎರಡನೆಯದಾಗಿ, ಪರಸ್ಪರರ ಒಪ್ಪಂದದ ಅನುಸಾರ ಉಡುಗೊರೆಯನ್ನು ಪೂರ್ಣ ಅಥವಾ ಭಾಗಶಃ, ದಾನಿಯ ಪೂರ್ಣ ಸಮ್ಮತಿಯೊಂದಿಗೆ ಹಿಂಪಡೆಯಬಹುದು. ಮೂರನೆಯದಾಗಿ, ಒಪ್ಪಂದದ ಉದ್ದೇಶವನ್ನೇ ರದ್ದುಗೊಳಿಸಿದ್ದ ಸಂದರ್ಭದಲ್ಲಿ ಹಿಂಪಡೆಯಬಹುದಾಗಿದೆ ಎಂದು ಹೇಳಿದೆ.
ತಮಿಳುನಾಡಿನ ಕಡಲೂರಿನಲ್ಲಿನ 3,750 ಚದರ ಅಡಿ ವಿಸ್ತೀರ್ಣದ ಭೂಮಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದ ಮದ್ರಾಸ್ ಹೈಕೋರ್ಟ್‌ನ ನಿಲುವು ಪ್ರಶ್ನಿಸಿ ಎನ್.ತಾಜುದ್ದೀನ್ ಎಂಬವರು ಸಲ್ಲಿಸಿದ್ದ ಮೇಲ್ಮನವಿಯನ್ನು ಪೀಠವು ಇದೇ ವೇಳೆ ವಜಾ ಮಾಡಿತು.
ಉಲ್ಲೇಖಿತ ಆಸ್ತಿಯನ್ನು ಖಾದಿ ಲುಂಗಿ ಮತ್ತು ಜವಳಿ ತಯಾರಿಸಲು ಬಳಸುವಂತೆ ಸೂಚಿಸಿ 1983ರಲ್ಲಿ ತಮಿಳುನಾಡು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ಉಡುಗೊರೆಯಾಗಿ ನೀಡಲಾಗಿತ್ತು.
ಈ ಪ್ರಕರಣದಲ್ಲಿ ದಾಖಲೆಯು ಸ್ಪಷ್ಟವಾಗಿದೆ. ಉಡುಗೊರೆಯನ್ನು ರದ್ದುಪಡಿಸುವ ಯಾವುದೇ ಹಕ್ಕು ದಾಖಲೆಯಲ್ಲಿ ಉಲ್ಲೇಖವಾಗಿಲ್ಲ. ಉಡುಗೊರೆ ರದ್ದುಪಡಿಸುವ ಯಾವುದೇ ಅಂಶವನ್ನು ಉಲ್ಲೇಖಿಸಿಲ್ಲ. ಹೀಗಾಗಿ, ಉಡುಗೊರೆಯನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಪೀಠವು ಸ್ಪಷ್ಟಪಡಿಸಿತು.
ಉಲ್ಲೇಖಿತ ಆಸ್ತಿಯನ್ನು ಖಾದಿ ಜವಳಿ ಉತ್ಪಾದಿಸುವ ನಿರ್ದಿಷ್ಟ ಉದ್ದೇಶಕ್ಕೆ ಬಳಸಿಲ್ಲ. ಅದನ್ನು ಖಾಲಿ ಉಳಿಸಿರುವುದು ಉದ್ದೇಶದ ಪಾಲನೆಯಾಗಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.
ಈ ಅಂಶಕ್ಕೆ ಪೀಠವು, ಉಡುಗೊರೆ ಪತ್ರದಲ್ಲಿ ಆಸ್ತಿಯನ್ನು ನಿರ್ದಿಷ್ಟ ಉದ್ದೇಶಕ್ಕೆ ಬಳಕೆಯಾಗದಿದ್ದರೆ ಪತ್ರ ರದ್ದಾಗಲಿದೆ ಅಥವಾ ದಾನಿಯು ಹಿಂಪಡೆಯಬಹುದು ಎಂಬ ಅಂಶ ಇಲ್ಲ ಎಂದು ಹೇಳಿತು.