ಪಟ್ನಾ: ಪಾತಕಿ ಬಿಷ್ಣೋಯಿ ಗ್ಯಾಂಗ್‌ನಿಂದ ಬೆದರಿಕೆ ಕರೆ ಬಂದಿದ್ದು, ಭದ್ರತೆಯನ್ನು ಹೆಚ್ಚಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬಿಹಾರದ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಪತ್ರ ಬರೆದಿದ್ದಾರೆ.
ಪಟ್ನಾ: ಪಾತಕಿ ಬಿಷ್ಣೋಯಿ ಗ್ಯಾಂಗ್‌ನಿಂದ ಬೆದರಿಕೆ ಕರೆ ಬಂದಿದ್ದು, ಭದ್ರತೆಯನ್ನು ಹೆಚ್ಚಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬಿಹಾರದ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಪತ್ರ ಬರೆದಿದ್ದಾರೆ.
ಪೂರ್ಣಿಯಾ ಲೋಕಸಭಾ ಕ್ಷೇತ್ರದ ಸಂಸದರು, ಕೇಂದ್ರ ಗೃಹ ಸಚಿವರಿಗೆ ಅ.21ರಂದು ಬರೆದಿರುವ ಎರಡು ಪುಟಗಳ ಪತ್ರವನ್ನು ಸೋಮವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಇದರ ಪ್ರತಿಗಳನ್ನು ಬಿಹಾರದ ಮುಖ್ಯಮಂತ್ರಿ ಹಾಗೂ ಉನ್ನತ ಅಧಿಕಾರಿಗಳಿಗೂ ಕಳಿಸಿದ್ದಾರೆ.
ಬಿಷ್ಣೋಯಿ ಅವರ ಸಹಾಯಕನು ದುಬೈನ ಸಂಖ್ಯೆಯಿಂದ ಮಾಡಿರುವ ಫೋನ್ ಕರೆಯ ಆಡಿಯೊ ಕ್ಲಿಪ್ ಅನ್ನು ಮಾಧ್ಯಮವೊಂದು ಬಿತ್ತರಿಸಿದೆ.
'ನಾನು ಕೊಲೆಯಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಕೆಟ್ಟ ಆಪಾದನೆ ಬರಲಿದೆ. ಆದ್ದರಿಂದ ಇದೀಗ ನನಗಿರುವ 'ವೈ' ಶ್ರೇಣಿಯ ಭದ್ರತೆಯನ್ನು 'ಝಡ್' ಶ್ರೇಣಿಗೆ ಉನ್ನತೀಕರಿಸುವ ಜೊತೆಗೆ, ಬಿಹಾರದಲ್ಲಿ ಹಾಜರಾಗುವ ಎಲ್ಲ ಕಾರ್ಯಕ್ರಮಗಳಿಗೂ ಪೊಲೀಸ್ ಬೆಂಗಾವಲು ಪಡೆಯನ್ನು ಒದಗಿಸುವಂತೆ' ಪತ್ರದಲ್ಲಿ ಪಪ್ಪು ಉಲ್ಲೇಖಿಸಿದ್ದಾರೆ.
'ಕಾನೂನು ಅನುಮತಿಸಿದರೆ, ಕೊಲೆಯ ಹಿಂದಿರುವ ಬಿಷ್ಣೋಯಿ ಗ್ಯಾಂಗ್‌ನ ಜಾಲವನ್ನು ಸಂಪೂರ್ಣ ನಾಶ ಮಾಡಲಾಗುವುದು' ಎಂದು ಎನ್‌ಸಿಪಿ ಮುಖಂಡ ಬಾಬಾ ಸಿದ್ದೀಕಿ ಹತ್ಯೆಯ ನಂತರ ಪಪ್ಪು ಯಾದವ್ 'ಎಕ್ಸ್'ನಲ್ಲಿ ಹೇಳಿಕೆಯೊಂದನ್ನು ಪೋಸ್ಟ್ ಮಾಡಿದ್ದರು.
'ಸಂಸದರ ಪತ್ರದ ಬಗ್ಗೆ ಮಾಧ್ಯಮಗಳಿಂದ ತಿಳಿದಿದ್ದೇವೆ. ಅವರಿಗೆ ಒದಗಿಸಿರುವ ಭದ್ರತೆಗೆ ಅನುಗುಣವಾಗಿ ಅವರ ಸುರಕ್ಷತೆಗಾಗಿ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತೇವೆ' ಎಂದು ಪೂರ್ಣಿಯಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕೇಯ ಶರ್ಮಾ ಹೇಳಿದ್ದಾರೆ.