ಇಸ್ಲಾಮಾಬಾದ್: ದೇಶದಲ್ಲಿ ಪೋಲಿಯೊ ಪ್ರಕರಣಗಳು ಏರಿಕೆಯಾದ ಬೆನ್ನಲ್ಲೇ ಮಕ್ಕಳಿಗೆ ಲಸಿಕೆ ನೀಡಲು ಪಾಕಿಸ್ತಾನವು ತನ್ನ ಮೂರನೇ ರಾಷ್ಟ್ರವ್ಯಾಪಿ ಪೋಲಿಯೊ ಲಸಿಕಾ ಅಭಿಯಾನವನ್ನು ಇಂದು (ಸೋಮವಾರ) ಪ್ರಾರಂಭಿಸಿದೆ.
'ಪೋಲಿಯೊ ಲಸಿಕೆ ಅಭಿಯಾನವು ನವೆಂಬರ್ 3ರವರೆಗೆ ನಡೆಯಲಿದ್ದು, ಪೋಲಿಯೊ ನಿರ್ಮೂಲನೆಯ ಗುರಿಯನ್ನು ಹೊಂದಿದೆ.
ಅಭಿಯಾನದಡಿಯಲ್ಲಿ ಆರೋಗ್ಯ ಇಲಾಖೆಗಳ ವಿಶೇಷ ತಂಡಗಳು ಮನೆ ಮನೆಗೆ ತೆರಳಿ 5 ವರ್ಷದೊಳಗಿನ ಸುಮಾರು 45 ದಶಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ ನೀಡಲಿವೆ. ಅಲ್ಲದೆ ಹೆಚ್ಚುವರಿ ರೋಗನಿರೋಧಕ ಶಕ್ತಿಗಾಗಿ ಮಕ್ಕಳಿಗೆ ವಿಟಮಿನ್-ಎ ಸಹ ನೀಡಲಾಗುವುದು' ಎಂದು ವರದಿ ತಿಳಿಸಿದೆ.
ಕಳೆದ ವಾರ (ಅಕ್ಟೋಬರ್ 24) ವಿಶ್ವ ಪೋಲಿಯೊ ದಿನದಂದು ಪ್ರಧಾನಿ ಶೆಹಬಾಜ್ ಷರೀಫ್ ಅವರು ಪೋಲಿಯೊ ಅಭಿಯಾನವನ್ನು ಉದ್ಘಾಟಿಸಿದ್ದರು ಎಂದು ಡಾನ್ ಪತ್ರಿಕೆ ವರದಿ ಮಾಡಿತ್ತು.
ಈ ವರ್ಷ ಪಾಕಿಸ್ತಾನದಲ್ಲಿ 41 ಪೋಲಿಯೊ ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ ಬಲೂಚಿಸ್ತಾನದಲ್ಲಿ 21, ಸಿಂಧ್ 12, ಖೈಬರ್ ಪಖ್ತುಂಕ್ವಾದಿಂದ 6 ಮತ್ತು ಪಂಜಾಬ್ ಹಾಗೂ ಇಸ್ಲಾಮಾಬಾದ್ ಪ್ರಾಂತ್ಯಗಳಿಂದ ತಲಾ ಒಂದು ಪ್ರಕರಣ ವರದಿಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನದಲ್ಲಿ ಮಾತ್ರ ಪೋಲಿಯೊ ಉಳಿದುಕೊಂಡಿದೆ.