ಕೊಚ್ಚಿ: ತಿರುವನಂತಪುರಂ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಚಿಕನ್ ಬಿರಿಯಾನಿ ಔತಣಕ್ಕೆ ಹೈಕೋರ್ಟ್ ಖೇದ ವ್ಯಕ್ತಪಡಿಸಿದೆ. ಘಟನೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಕೃತ್ಯಗಳು ಮರುಕಳಿಸಬಾರದು ಎಂದು ಹೈಕೋರ್ಟ್ ಸೂಚಿಸಿದೆ.
ಮುಖ್ಯ ವಿಜಿಲೆನ್ಸ್ ಅಧಿಕಾರಿಯ ತನಿಖಾ ವರದಿಯನ್ನು ಪರಿಗಣಿಸಿ ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧ ಆಡಳಿತ ಸಮಿತಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಇಂತಹ ಘಟನೆಗಳಿಗೆ ಅವಕಾಶ ನೀಡುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ. ಭಕ್ತರು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ. ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿಜಿ ಅಜಿತ್ ಕುಮಾರ್ ಅವರನ್ನೊಳಗೊಂಡ ದೇವಸ್ವಂ ಪೀಠ ಈ ಆದೇಶ ನೀಡಿದೆ.
ಕೆಲ ತಿಂಗಳ ಹಿಂದೆ ಈ ಘಟನೆ ನಡೆದಿತ್ತು. ಉತ್ತರ ಗೋಪುರದ ಬಳಿ ಇರುವ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳ ಕಟ್ಟಡದಲ್ಲಿ ಸತ್ಕಾರ ಕೂಟ ನಡೆಸಿ ಚಿಕನ್ ಬಿರಿಯಾನಿ ವಿತರಿಸಲಾಗಿತ್ತು. ನೌಕರನೋರ್ವನ ಪುತ್ರನಿಗೆ ಸರ್ಕಾರಿ ನೌಕರಿ ಸಿಕ್ಕಿದ ಕಾರಣಕ್ಕೆ ಔತಣ ಕೂಟ ನಡೆದಿದೆ ಎನ್ನಲಾಗಿದೆ. ಘಟನೆಯ ದೃಶ್ಯಾವಳಿಗಳು ಹೊರಬಂದ ನಂತರ, ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.