ಜೆರುಸಲೇಂ: ಹಮಾಸ್ ಬಂಡುಕೋರರು ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ಆರಂಭಿಸುವ ಮುನ್ನ ಯಹ್ಯಾ ಸಿನ್ವರ್ ಅವರು ಗಾಜಾದ ಸುರಂಗದಲ್ಲಿ ದೀರ್ಘ ಕಾಲ ತಂಗಲು ತಯಾರಿ ನಡೆಸಿದ್ದ ವಿಡಿಯೊವನ್ನು ಇಸ್ರೇಲ್ ಸೇನೆ ಶನಿವಾರ ಬಿಡುಗಡೆ ಮಾಡಿದೆ.
ಇಸ್ರೇಲ್ ಮೇಲಿನ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬರಾಗಿದ್ದ ಸಿನ್ವರ್ ಅವರನ್ನು ಇಸ್ರೇಲ್ ಸೇನೆ ಕಳೆದ ವಾರ ಹತ್ಯೆ ಮಾಡಿತ್ತು.
ಸಿನ್ವರ್ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸುರಂಗದೊಳಗೆ ತೆರಳುತ್ತಿರುವ ದೃಶ್ಯ ಹೊಸ ವಿಡಿಯೊದಲ್ಲಿದೆ. 'ಗಾಜಾ ಪಟ್ಟಿಯ ಖಾನ್ ಯೂನಿಸ್‌ನಲ್ಲಿರುವ ಅವರ ಮನೆಯ ಕೆಳಗಡೆ ಇರುವ ಸುರಂಗ ಅದಾಗಿದೆ' ಎಂದು ವಿಡಿಯೊ ಬಿಡುಗಡೆಗೊಳಿಸಿದ ಇಸ್ರೇನ್ ಸೇನೆಯ ವಕ್ತಾರ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿದ್ದಾರೆ.
'ಹಮಾಸ್ ನಡೆಸಿದ ಹತ್ಯಾಕಾಂಡಕ್ಕೆ ಕೆಲವೇ ಗಂಟೆಗಳ ಮೊದಲು, 2023ರ ಅಕ್ಟೋಬರ್ 6ರ ರಾತ್ರಿ ಸಿನ್ವರ್ ಮತ್ತು ಅವರ ಕುಟುಂಬದ ಸದಸ್ಯರು ಮನೆಯ ಕೆಳಗಿರುವ ಸುರಂಗದಲ್ಲಿ ಅಡಗಿಕೊಳ್ಳುವುದನ್ನು ನೀವು ನೋಡಬಹುದು' ಎಂದು ಅವರು ವಿಡಿಯೊ ದೃಶ್ಯ ತೋರಿಸುತ್ತಾ ತಿಳಿಸಿದರು.
'ಯುದ್ಧ ಆರಂಭವಾದ ಬಳಿಕ ಕಳೆದ ಒಂದು ವರ್ಷದಲ್ಲಿ ಇಸ್ರೇಲ್ ಸೇನೆಯ ಕೈಗೆ ಸಿಕ್ಕಿ ಬೀಳುವುದರಿಂದ ಹಲವು ಸಲ ಅವರು ಅಲ್ಪದರಲ್ಲೇ ಪಾರಾಗಿದ್ದರು. ಸಿನ್ವರ್ ಅವರು ಬಹುಪಾಲು ಸಮಯವನ್ನು ಖಾನ್ ಯೂನಿಸ್ ಮತ್ತು ರಫಾ ಪಟ್ಟಣದ ನಡುವೆ ಇರುವ ಸುರಂಗದಲ್ಲಿ ಕಳೆದಿದ್ದಾರೆ' ಎಂದು ಹೇಳಿದರು.
'ಸಿನ್ವರ್ ಮತ್ತು ಅವರ ಮಗ ಹಲವು ಸಲ ಅತ್ತಿತ್ತ ಹೋಗುವ ದೃಶ್ಯ ವಿಡಿಯೊದಲ್ಲಿದೆ. ಆಹಾರ, ನೀರು, ಹಾಸಿಗೆ, ದಿಂಬುಗಳು, ಟಿ.ವಿ ಮತ್ತು ಇತರ ಅಗತ್ಯ ವಸ್ತುಗಳನ್ನು ಸುರಂಗಕ್ಕೆ ಕೊಂಡೊಯ್ದು ಅಲ್ಲಿ ದೀರ್ಘ ಕಾಲ ಉಳಿದುಕೊಳ್ಳಲು ತಯಾರಿ ನಡೆಸಿದ್ದರು' ಎಂದರು.
ಉತ್ತರ ಗಾಜಾ: 87 ಬಲಿ
ದಾರ್ ಅಲ್ ಬಲಾ (ಗಾಜಾಪಟ್ಟಿ): ಗಾಜಾಪಟ್ಟಿಯ ಉತ್ತರ ಭಾಗದ ಹಲವು ಮನೆಗಳನ್ನು ಗುರಿಯಾಗಿಸಿ ಇಸ್ರೇಲ್ ಸೇನೆ ಭಾನುವಾರ ನಡೆಸಿದ ದಾಳಿಯಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 87 ಮಂದಿ ಬಲಿಯಾಗಿದ್ದಾರೆ ಎಂದು ಇಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.
ಬೈತ್ ಲಾಹಿಯಾ ಪಟ್ಟಣದಲ್ಲಿ ನಡೆದಿರುವ ದಾಳಿಯಲ್ಲಿ ಇತರ 40 ಮಂದಿ ಗಾಯಗೊಂಡಿದ್ದಾರೆ. ಈ ದಾಳಿ ಬಗ್ಗೆ ಇಸ್ರೇಲ್ ಸೇನೆ ಯಾವುದೇ ಹೇಳಿಕೆ ಬಿಡುಗಡೆಗೊಳಿಸಿಲ್ಲ.
'ತಂದೆ ತಾಯಿ ಮತ್ತು ನಾಲ್ವರು ಮಕ್ಕಳು ಒಬ್ಬ ಮಹಿಳೆ ಆಕೆಯ ಮಗ- ಸೊಸೆ ಮತ್ತು ಅವರ ನಾಲ್ವರು ಮಕ್ಕಳು ಮೃತರಲ್ಲಿ ಸೇರಿದ್ದಾರೆ' ಎಂದು ಕಮಲ್ ಅದ್ವನ್ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದ್ದಾರೆ.
ರಹಸ್ಯ ದಾಖಲೆ ಸೋರಿಕೆ: ಅಮೆರಿಕ ತನಿಖೆ
ವಾಷಿಂಗ್ಟನ್: ಇರಾನ್‌ನ ಮೇಲೆ ದಾಳಿ ಮಾಡುವ ಇಸ್ರೇಲ್‌ನ ಯೋಜನೆಗೆ ಸಂಬಂಧಿಸಿದ ರಹಸ್ಯ ದಾಖಲೆಗಳು ಸೋರಿಕೆಯಾಗಿರುವ ಘಟನೆ ಬಗ್ಗೆ ಅಮೆರಿಕವು ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಹಸ್ಯ ದಾಖಲೆಗಳು ಯುಎಸ್ ಜಿಯೋಸ್ಪೇಶಿಯಲ್ ಇಂಟೆಲಿಜೆನ್ಸ್ ಏಜೆನ್ಸಿ ಮತ್ತು ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿಗೆ ಸೇರಿದ್ದಾಗಿತ್ತು. ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಪ್ರತಿಯಾಗಿ ದಾಳಿ ನಡೆಸಲು ಇಸ್ರೇಲ್ ತನ್ನ ಅಸ್ತ್ರಗಳನ್ನು ಸಜ್ಜುಗೊಳಿಸುತ್ತಿರುವುದರ ಕುರಿತ ಮಾಹಿತಿಯು ರಹಸ್ಯ ದಾಖಲೆಯಲ್ಲಿದೆ. ಅಮೆರಿಕದ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸಿದ್ದಾರೆಯೇ ಅಥವಾ ಹ್ಯಾಕರ್‌ಗಳು ದಾಖಲೆ ಸೋರಿಕೆ ಮಾಡಿದ್ದಾರೆಯೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿರುವುದಾಗಿ ಮೂಲಗಳು ಹೇಳಿವೆ.