HEALTH TIPS

ವೈದ್ಯಕೀಯ ಕಾಲೇಜಿನಲ್ಲಿ ಹಾಲೊವೀನ್‌: ಗಂಗಾಜಲ ಪ್ರೋಕ್ಷಿಸಿ ಶುದ್ಧೀಕರಿಸಿದ ವೈದ್ಯರು

 ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಮಹಾತ್ಮಾ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜು ಆವರಣದಲ್ಲಿನ 150 ವರ್ಷಗಳ ಪಾರಂಪರಿಕ ಕಟ್ಟಡದಲ್ಲಿ ಹಾಲೊವೀನ್‌ ಪಾರ್ಟಿಯನ್ನು ಅಕ್ರಮವಾಗಿ ಆಯೋಜಿಸಲಾಗಿದೆ ಎಂದು ಆರೋಪಿಸಲಾಗಿದ್ದು, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮಂಗಳವಾರ ಗಂಗಾಜಲ ಪ್ರೋಕ್ಷಿಸಿ ಶುದ್ಧೀಕರಿಸಿದ್ದಾರೆ ಎಂದು ವರದಿಯಾಗಿದೆ.

ಕಿಂಗ್ ಎಡ್ವರ್ಡ್‌ ವೈದ್ಯಕೀಯ ಕಾಲೇಜು ಕಟ್ಟಡ ಎಂಬಲ್ಲಿ ಹಾಲೊವೀನ್‌ ಆಯೋಜನೆ ಕುರಿತಂತೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಅನುಮತಿ ನೀಡಿರಲಿಲ್ಲ ಎಂದು ಕಾಲೇಜಿನ ಆಡಳಿತ ಮಂಡಳಿ ಹೇಳಿದೆ. ಈ ಕಟ್ಟಡವನ್ನು ಬ್ರಿಟಿಷರು 1878ರಲ್ಲಿ ನಿರ್ಮಿಸಿದ್ದರು.

'ಈ ಪಾರಂಪರಿಕ ಕಟ್ಟಡದಲ್ಲಿ ಹಾಲೊವೀನ್‌ ಪಾರ್ಟಿ ಆಯೋಜಿಸಲಾಗಿತ್ತು ಎಂಬ ಮಾಹಿತಿ ಇದೆ. ಹೀಗಾಗಿ ಕಟ್ಟಡದಲ್ಲಿ ಗಂಗಾಜಲ ಪ್ರೋಕ್ಷಿಸಿ ಶುದ್ಧೀಕರಿಸಲಾಗಿದೆ' ಎಂದು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರಾಹುಲ್ ರೋಕ್ಡೆ ಹೇಳಿದ್ದಾರೆ.

'ಸ್ಥಳೀಯ ಸಂಸ್ಥೆಯಾದ ಜೈನ್ ಸೋಷಿಯಲ್ ಗ್ರೂಪ್‌ನ ಪ್ರತಿನಿಧಿಗಳಿಗೆ ಕಾಲೇಜಿನ ಆವರಣದ ಅಧ್ಯಯನಕ್ಕೆ ಅನುಮತಿಸಲಾಗಿತ್ತು. ಆದರೆ ಹಾಲೊವೀನ್‌ ಪಾರ್ಟಿ ಆಯೋಜಿಸಲು ಯಾವುದೇ ಅನುಮತಿ ನೀಡಿರಲಿಲ್ಲ. ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಲಾಗಿದೆ' ಎಂದು ಕಾಲೇಜಿನ ಡೀನ್ ಡಾ. ಸಂಜಯ ದೀಕ್ಷಿತ್ ಹೇಳಿದ್ದಾರೆ.

ಸ್ತ್ರಿ ಚಿತ್ರದಿಂದ ಪ್ರೇರೇಪಿತ ಗೋಡೆ ಬರಹ!

ಪ್ರತ್ಯಕ್ಷದರ್ಶಿಗಳ ಪ್ರಕಾರ, 'ಕಟ್ಟಡದ ಗೋಡೆಗಳ ಮೇಲೆ 'ಓ ಸ್ತ್ರೀ, ಕಲ್‌ ಆನಾ' (ಓ ಮಹಿಳೆ, ನಾಳೆ ಬಾ) ಎಂಬ ಬಾಲಿವುಡ್‌ನ ಹಾರಾರ್ ಚಿತ್ರ 'ಸ್ತ್ರೀ'ನಲ್ಲಿ ಬಳಕೆಯಾದ ಸಾಲುಗಳನ್ನು ಬರೆಯಲಾಗಿತ್ತು. ಜತೆಗೆ ಕೆಲವೊಂದು ಭಯಾನಕ ವಾಕ್ಯಗಳು ಹಾಗೂ ಆಕ್ಷೇಪಾರ್ಹ ಚಿತ್ರಗಳು ಇದ್ದವು' ಎಂದಿದ್ದಾರೆ.

'ಈ ಕಟ್ಟಡವನ್ನು ಹಾಲೊವೀನ್‌ ಪಾರ್ಟಿಗಾಗಿಯೇ ದೆವ್ವದ ಮನೆಯಂತೆ ಬಣ್ಣ ಹಚ್ಚಲಾಗಿತ್ತು. ಈ ಕಟ್ಟಡವನ್ನು ವೈದ್ಯಕೀಯ ಸಂಶೋಧನೆ ಹಾಗೂ ಅಧ್ಯಯನದ ಉದ್ದೇಶಕ್ಕೆ ಬಳಸುತ್ತಾ ಬರಲಾಗಿದೆ. ಬಹಳಷ್ಟು ಪ್ರಸಿದ್ಧ ವೈದ್ಯರು ಇಲ್ಲಿ ಕಲಿತಿದ್ದಾರೆ ಹಾಗೂ ಕಲಿಸಿದ್ದಾರೆ. ಆದರೆ, ಇಲ್ಲಿ ಇಂಥ ಕೃತ್ಯಗಳಿಗೆ ಯಾವುದೇ ಅವಕಾಶವಿಲ್ಲ' ಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಸುಮೀತ್ ಶುಕ್ಲಾ ಹೇಳಿದ್ದಾರೆ.

ಹಾಲೊವೀನ್‌ ಅನ್ನು ಅ. 31ರಂದು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries