ಹೈದರಾಬಾದ್: ಮಾನವಹಕ್ಕು ಹೋರಾಟಗಾರ ಹಾಗೂ ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಜಿ.ಎನ್. ಸಾಯಿಬಾಬಾ (58) ಅವರು ತೀವ್ರ ಅನಾರೋಗ್ಯದಿಂದ ಶನಿವಾರ ರಾತ್ರಿ ಇಲ್ಲಿನ ನಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
ಸಾಯಿಬಾಬಾ ಅವರು ಇತ್ತೀಚೆಗಷ್ಟೇ ಪಿತ್ತಕೋಶದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ನಕ್ಸಲರೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನುವ ಆರೋಪ ಹೊರಿಸಿ 2014ರಲ್ಲಿ ಮಹಾರಾಷ್ಟ್ರ ಪೊಲೀಸರು ಸಾಯಿಬಾಬಾ ಅವರನ್ನು ಬಂಧಿಸಿದ್ದರು. ಇದೇ ಪ್ರಕರಣ ಸಂಬಂಧ ಅವರು 10 ವರ್ಷ ಜೈಲುವಾಸ ಅನುಭವಿಸಿದ್ದರು. 'ಸಾಯಿಬಾಬಾ ಅವರ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ' ಎಂದು 2024ರ ಮಾರ್ಚ್‌ನಲ್ಲಿ ಬಾಂಬೆ ಹೈಕೋರ್ಟ್ ತೀರ್ಪು ನೀಡಿತ್ತು. ಜೈಲಿನಿಂದ ಬಿಡುಗಡೆಯಾದ 7 ತಿಂಗಳಲ್ಲೇ ಅವರು ನಿಧನರಾಗಿದ್ದಾರೆ.
ಆಂಧ್ರ ಪ್ರದೇಶದ ಅಮಲಾಪುರದ ಬಡ ರೈತ ಕುಟುಂಬದಲ್ಲಿ ಸಾಯಿಬಾಬಾ ಜನಿಸಿದ್ದರು. ದೆಹಲಿ ವಿಶ್ವವಿದ್ಯಾಲಯದ ರಾಮ್ ಲಾಲ್ ಆನಂದ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಜೈಲಿಗೆ ಹೋದ ಬಳಿಕ, ಅವರನ್ನು ಉದ್ಯೋಗದಿಂದ ಅಮಾನತು ಮಾಡಲಾಗಿತ್ತು.
ಸಾಯಿಬಾಬಾ ಅವರಿಗೆ ಐದು ವರ್ಷ ಇರುವಾಗಲೇ ಪೋಲಿಯೊ ಬಂದಿತ್ತು. ಅಲ್ಲಿಂದ ಇಲ್ಲಿಯವರೆಗೂ ಅವರು ವೀಲ್‌ಚೇರ್‌ನಲ್ಲಿಯೇ ಇದ್ದರು. ರಕ್ತನಾಳದ ಊತ, ಹೃದಯ ಸಂಬಂಧಿ ಖಾಯಿಲೆ, ತೀವ್ರ ರಕ್ತದೊತ್ತಡ ಸೇರಿದಂತೆ ಹಲವು ವಿಧದ ರೋಗಗಳಿಂದ ಬಳಲುತ್ತಿದ್ದರು. ನರಮಂಡಲ ಸಂಬಂಧಿತ ಕಾಯಿಲೆಯೂ ಅವರಿಗಿತ್ತು. ಇದೇ ಕಾರಣಕ್ಕೆ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದವು. ಈ ಎಲ್ಲ ಕಾರಣದಿಂದ ದೇಹದ ಶೇ 90ರಷ್ಟು ಭಾಗ ಅಂಗವೈಕಲ್ಯಕ್ಕೆ ಒಳಗಾಗಿತ್ತು.
ಬಹುವಿಧದ ಆರೋಗ್ಯ ಸಮಸ್ಯೆಯ ಕಾರಣಕ್ಕೆ ಸಾಯಿಬಾಬಾ ಅವರ ಕುಟುಂಬದವರು ಪದೇ ಪದೇ ಜಾಮೀನು ಕೋರಿ ಅರ್ಜಿ ಸಲ್ಲಿಸುತ್ತಲೇ ಇದ್ದರು. ಜೈಲುವಾಸದ ಸಂದರ್ಭದಲ್ಲಿ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು.