ಬ್ರಸೆಲ್ಸ್: ಉಕ್ರೇನ್ ವಿರುದ್ಧ ಯುದ್ಧಕ್ಕಿಳಿದಿರುವ ರಷ್ಯಾಗೆ ನೆರವಾಗಲು ಉತ್ತರ ಕೊರಿಯಾದ ಸೇನಾ ಪಡೆಗಳನ್ನು ಕಳುಹಿಸಲಾಗಿದೆ ಎಂದು ನ್ಯಾಟೊ ದೃಢಪಡಿಸಿದೆ.
'ಉತ್ತರ ಕೊರಿಯಾದಿಂದ ರಷ್ಯಾಗೆ ಕಳುಹಿಸಿರುವ ಸೇನಾ ಪಡೆಗಳನ್ನು ಕರ್ಸ್ಕ್ ಪ್ರದೇಶದಲ್ಲಿ ನಿಯೋಜಿಸಿರುವುದನ್ನು ದೃಢಪಡಿಸುತ್ತೇನೆ.
ಬ್ರಸೆಲ್ಸ್‌ನಲ್ಲಿರುವ ನ್ಯಾಟೊ ಕೇಂದ್ರ ಕಚೇರಿಯಲ್ಲಿ ಗುಪ್ತಚರ ಮತ್ತು ಮಿಲಿಟರಿ ಅಧಿಕಾರಿಗಳಿದ್ದ ದಕ್ಷಿಣ ಕೊರಿಯಾದ ನಿಯೋಗ ಹಾಗೂ ಹಿರಿಯ ರಾಜತಾಂತ್ರಿಕರು ಈ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದ ಬಳಿಕ ರುಟ್ಟೆ ಈ ಮಾಹಿತಿ ನೀಡಿದ್ದಾರೆ.
'ಈ ಬೆಳವಣಿಗೆಗಳ ಬಗ್ಗೆ ದಕ್ಷಿಣ ಕೊರಿಯಾದ ಅಧ್ಯಕ್ಷ ಹಾಗೂ ಉಕ್ರೇನಿನ ರಕ್ಷಣಾ ಸಚಿವರೊಂದಿಗೆ ಶೀಘ್ರವೇ ಚರ್ಚಿಸುತ್ತೇನೆ' ಎಂದು ರುಟ್ಟೆ ತಿಳಿಸಿದ್ದಾರೆ.
ಉತ್ತರ ಕೊರಿಯಾದ ಸಾವಿರಾರು ಸೈನಿಕರನ್ನು ಯುರೋಪಿನ ಯುದ್ಧಕ್ಕೆ ಕಳುಹಿಸುತ್ತಿರುವುದು ಈಗಾಗಲೇ ದಣಿದಿರುವ ಉಕ್ರೇನ್ ಮೇಲೆ ಅತಿಯಾದ ಒತ್ತಡ ಬೀರಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಗುಪ್ತಚರ ಮಾಹಿತಿ ಆಧರಿಸಿ ಕಳೆದ ಶುಕ್ರವಾರ ಉತ್ತರ ಕೊರಿಯಾದ ಪಡೆಗಳು ಕೆಲವೇ ದಿನಗಳಲ್ಲಿ ಯುದ್ಧಭೂಮಿಗೆ ಬರಲಿವೆ ಎಂದು ತಿಳಿಸಿದ್ದರು.
ಉತ್ತರ ಕೊರಿಯಾದಿಂದ ಸುಮಾರು 10 ಸಾವಿರ ಪಡೆಗಳನ್ನು ರಷ್ಯಾದ ಸೇನೆ ಸೇರಲು ಕಳುಹಿಸಲಾಗುತ್ತಿದೆ ಎಂದು ತಮ್ಮ ಸರ್ಕಾರ ತಿಳಿಸಿದ್ದಾಗಿ ಅವರು ಹೇಳಿದ್ದರು. ಅದಕ್ಕೂ ಮುನ್ನವೇ ರಷ್ಯಾಗೆ ಉತ್ತರ ಕೊರಿಯಾದ ಸೇನಾಪಡೆಗಳನ್ನು ಕಳುಹಿಸಿರುವ ಬಗ್ಗೆ ಸಾಕ್ಷಿಯಿದೆ ಎಂದು ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಅಧಿಕಾರಿಗಳು ತಿಳಿಸಿದ್ದರು. ಈಗಾಗಲೇ ಉತ್ತರ ಕೊರಿಯಾದ 3,000 ಪಡೆಗಳನ್ನು ತರಬೇತಿಗಾಗಿ ರಷ್ಯಾಗೆ ಕಳುಹಿಸಲಾಗಿದೆ ಎಂದು ಅಮೆರಿಕ ತಿಳಿಸಿದೆ.