ಸ್ಟಾಕ್‌ಹೋಮ್: ರಸಾಯನವಿಜ್ಞಾನದಲ್ಲಿ ಕೈಗೊಂಡ ಸಂಶೋಧನೆಗಾಗಿ ಮೂವರು ವಿಜ್ಞಾನಿಗಳನ್ನು ಈ ವರ್ಷದ ನೊಬೆಲ್ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಬುಧವಾರ ಘೋಷಿಸಿದೆ.
ವಿಜ್ಞಾನಿಗಳಾದ ಡೇವಿಡ್ ಬೇಕರ್, ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಎಂ. ಜಂಪರ್ ಅವರು ಪ್ರತಿಷ್ಠಿತ ಪ್ರಶಸ್ತಿಗೆ ಭಾಜರಾಗಿದ್ದಾರೆ.
ಬಹುಮಾನದ ಒಟ್ಟು ಮೊತ್ತದಲ್ಲಿ ಅರ್ಧ ಭಾಗವನ್ನು ಡೇವಿಡ್ ಬೇಕರ್‌ಗೆ ನೀಡಲಾಗುವುದು. ಉಳಿದರ್ದವನ್ನು ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಎಂ. ಜಂಪರ್ ಅವರಿಗೆ ಕೊಡಲಾಗುವುದು ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.
ಡೇವಿಡ್ ಬೇಕರ್ ಅವರಿಗೆ 'ಕಂಪ್ಯೂಟೇಶನಲ್ ಪ್ರೋಟೀನ್' ವಿನ್ಯಾಸದಲ್ಲಿ ನಡೆಸಿದ ಸಂಶೋಧನೆಗೆ ಹಾಗೂ ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಎಂ. ಜಂಪರ್ ಅವರು 'ಪ್ರೋಟೀನ್ ಸಂರಚನೆ' ಕುರಿತು ಜಂಟಿಯಾಗಿ ನಡೆಸಿದ ಸಂಶೋಧನೆಗೆ ಈ ಪ್ರಶಸ್ತಿ ನೀಡಲಾಗಿದೆ.
ಡೇವಿಡ್ ಬೇಕರ್ ಅವರು ಅಮೆರಿಕದವರಾಗಿದ್ದು ವಾಷಿಂಗ್ಟನ್ ವಿಶ್ವವಿದ್ಯಾಲಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಎಂ. ಜಂಪರ್ ಅವರು ಇಂಗ್ಲೆಂಡ್ ದೇಶದವರು. ಇವರು ಲಂಡನ್‌ನಲ್ಲಿ ಗೂಗಲ್ ಕಂಪನಿಯ ಎಐ(Artificial intelligence) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.
1901ರಿಂದ 2023ರವರೆಗೆ 115 ಬಾರಿ ರಸಾಯನಶಾಸ್ತ್ರ ನೊಬೆಲ್ ನೀಡಲಾಗಿದೆ. ಒಟ್ಟು 194 ವಿಜ್ಞಾನಿಗಳಿಗೆ ಈ ಪ್ರಶಸ್ತಿ ಸಂದಿದೆ.
ಕಳೆದ ವರ್ಷ ವಿಜ್ಞಾನಿಗಳಾದ ಕ್ಯಾರೊಲಿನ್ ಬರ್ಟೊಜಿ, ಮಾರ್ಟೆನ್ ಮೆಲ್ಡಲ್ ಹಾಗೂ ಕೆ.ಬ್ಯಾರಿ ಶಾರ್ಪ್‌ಲೆಸ್ ಅವರು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದರು.