ನವದೆಹಲಿ: 'ಮದರಸಾ ನಿರ್ವಹಣೆ ಕುರಿತು ರೂಪಿಸಿರುವ ಕಾಯ್ದೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಇಡೀ ಕಾಯ್ದೆಯೇ ಅಸಾಂವಿಧಾನಿಕ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿಲ್ಲ' ಎಂದು ಉತ್ತರ ಪ್ರದೇಶ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್ ಎದುರು ಪ್ರತಿಪಾದಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಮೂವರು ಸದಸ್ಯ ನ್ಯಾಯಪೀಠವು ಮಂಗಳವಾರ ಈ ಪ್ರಕರಣದ ವಿಚಾರಣೆಯ ವೇಳೆ, ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಅವರಿಗೆ, 'ರಾಜ್ಯದ ಕಾಯ್ದೆ ಸಿಂಧುತ್ವದ ಪರವಾಗಿ ಇದ್ದೀರಾ' ಎಂದು ಪ್ರಶ್ನಿಸಿತು.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆಯ ಆರಂಭದಲ್ಲೇ ಸಿಜೆಐ ಈ ಪ್ರಶ್ನೆ ಎತ್ತಿದ್ದರು. ರಾಜ್ಯ ಸರ್ಕಾರ 'ಉತ್ತರ ಪ್ರದೇಶ ಮದರಸಾ ಮಂಡಳಿ ಕಾಯ್ದೆ 2004' ರೂಪಿಸಿದೆ. ಇದು, ಮದರಸಾಗಳ ನಿರ್ವಹಣೆ, ಅಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಮತ್ತು ಸಂವಿಧಾನಕ್ಕೆ ಬದ್ಧರಾಗಿರುವುದರ ಖಾತರಿಪಡಿಸುತ್ತದೆ.
ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ, ಮನೋಜ್ ಮಿಶ್ರಾ ಅವರು ಪೀಠದ ಇತರ ಸದಸ್ಯರು
ಈ ಕಾಯ್ದೆಯು 'ಅಸಾಂವಿಧಾನಿಕ' ಎಂದು ಅಲಹಾಬಾದ್ ಹೈಕೋರ್ಟ್ ಮಾರ್ಚ್ 22ರಂದು ಘೋಷಿಸಿತ್ತು. ಇದು, ಜಾತ್ಯತೀತ ಸಿದ್ಧಾಂತಗಳ ಉಲ್ಲಂಘನೆಯಾಗಿದೆ ಎಂದೂ ಹೇಳಿತ್ತು. ಮದರಸಾಗಳಲ್ಲಿ ಇರುವ ವಿದ್ಯಾರ್ಥಿಗಳನ್ನು ಸಾಮಾನ್ಯ ಶಾಲೆಗಳಿಗೆ ದಾಖಲುಪಡಿಸಲು ಕ್ರಮವಹಿಸಬೇಕು ಎಂದೂ ಸೂಚಿಸಿತ್ತು.
ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಕಾಯ್ದೆಯನ್ನು ಸಮರ್ಥಿಸಿಕೊಂಡಿತ್ತು. ಆದರೆ, ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿರಲಿಲ್ಲ.
ಮಂಗಳವಾರ ಅರ್ಜಿಯ ವಿಚಾರಣೆಯ ವೇಳೆ ಸಿಜೆಐ ಅವರು ಎತ್ತಿದ್ದ ಪ್ರಶ್ನೆಗೆ ಅಟಾರ್ನಿ ಜನರಲ್ ಅವರು, 'ನಾನು ಕಾಯ್ದೆಯ ಸಿಂಧುತ್ವವನ್ನು ಬೆಂಬಲಿಸುತ್ತೇನೆ. ಈಗ ನ್ಯಾಯಾಂಗವು ಕಾಯ್ದೆಯನ್ನು ರದ್ದುಪಡಿಸಿರುವ ಕಾರಣ, ನಾವು ಕೆಲವೊಂದು ವಿಷಯವನ್ನು ಇಲ್ಲಿ ಹೇಳಬೇಕಾಗಿದೆ. ನಾವು ಕಾಯ್ದೆ ಸಮರ್ಥಿಸಿಕೊಳ್ಳುತ್ತೇವೆ. ಆದರೆ, ರಾಜ್ಯ ಸರ್ಕಾರ ವಿಶೇಷ ಮೇಲ್ಮನವಿಯನ್ನು ಸಲ್ಲಿಸಿಲ್ಲ' ಎಂದು ಪ್ರತಿಕ್ರಿಯಿಸಿದರು.
'ರಾಜ್ಯ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿ ಹೈಕೋರ್ಟ್‌ಗೂ ಪ್ರತಿಕ್ರಿಯೆ ದಾಖಲಿಸಿದೆ. ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಅಂಶವನ್ನು ಮಾತ್ರ ಹೈಕೋರ್ಟ್ ರದ್ದುಪಡಿಸಿದೆ. ಇಡೀ ಕಾಯ್ದೆಯನ್ನು ಅಲ್ಲ. ನಾವು ನಮ್ಮ ನಿಲುವಿನಿಂದ ಹಿಂದೆ ಸರಿಯುವುದಿಲ್ಲ' ಎಂದು ಅಟಾರ್ನಿ ಜನರಲ್ ಪ್ರತಿಪಾದಿಸಿದರು.
ಈ ನಡುವೆ ಪೀಠವು, 'ಸಂವಿಧಾನದ ಸೆಕ್ಷನ್ 20ರ ಅನ್ವಯ, ರಾಜ್ಯದಲ್ಲಿ ಮದರಸಾಗಳಲ್ಲಿ ಗುಣಮಟ್ಟದ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವ ಹಕ್ಕು ರಾಜ್ಯಕ್ಕಿದೆ. ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ ಈಡೇರುತ್ತಿಲ್ಲ ಎಂದು ಅನ್ನಿಸಿದಾಗ ರಾಜ್ಯ ಮಧ್ಯ ಪ್ರವೇಶಿಸಬಹುದಾಗಿದೆ' ಎಂದು ಸ್ಪಷ್ಟಪಡಿಸಿದೆ.