ನವದೆಹಲಿ: ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷ ಬುಧವಾರ ಘೋಷಿಸಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಎದುರು ಏಕಾಂಗಿಯಾಗಿ ಸ್ಪರ್ಧಿಸಲು ನಾವು ಸಬಲರಾಗಿದ್ದೇವೆ ಎಂದು ಎಎಪಿ ವಕ್ತಾರ ಪ್ರಿಯಾಂಕ ಕಕ್ಕರ್ ಹೇಳಿದರು.
'ಹರಿಯಾಣ ಚುನಾವಣೆಯಲ್ಲಿ ತನ್ನ ಮಿತ್ರಪಕ್ಷಗಳನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಲ್ಲ. ಇದರ ಪರಿಣಾಮ ಅದು ಕಡಿಮೆ ಸ್ಥಾನಗಳನ್ನು ಗೆಲ್ಲುವಂತಾಯಿತು' ಎಂದು ಪ್ರಿಯಾಂಕ ದೂರಿದರು.
ಕಳೆದ 10 ವರ್ಷದಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಶೂನ್ಯ ಸ್ಥಾನದಲ್ಲಿದೆ. ಆದರೂ ಲೋಕಸಭಾ ಚುನಾವಣೆಯಲ್ಲಿ ಎಎಪಿ ಕಾಂಗ್ರೆಸ್‌ಗೆ ಮೂರು ಸ್ಥಾನ ನೀಡಿತ್ತು. ಹೀಗಿದ್ದರೂ ಹರಿಯಾಣದಲ್ಲಿ ಮಿತ್ರಪಕ್ಷವಾದ ಎಎಪಿಯನ್ನು ಕಾಂಗ್ರೆಸ್ ಜತೆ ಕರೆದುಕೊಂಡು ಹೋಗಲಿಲ್ಲ ಎಂದು ದೂರಿದ ಅವರು, ಹರಿಯಾಣದಲ್ಲಿ ಮೈತ್ರಿ ಮಾಡಿಕೊಳ್ಳಲು ಇಂಡಿಯಾ ಬಣ ಮಾಡಿದ ಎಲ್ಲಾ ಪ್ರಯತ್ನಗಳನ್ನು ಕಾಂಗ್ರೆಸ್ ವಿಫಲಗೊಳಿಸಿತ್ತು ಎಂದರು.
ಎಎಪಿ ಮತ್ತು ಕಾಂಗ್ರೆಸ್ ನಡುವೆ ಸ್ಥಾನಗಳ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾದ ಕಾರಣ ಚುನಾವಣಾ ಪೂರ್ವ ಮೈತ್ರಿ ವಿಫಲವಾಗಿತ್ತು. ಅದಾಗ್ಯೂ ಹರಿಯಾಣದಲ್ಲಿ ಎಎಪಿ ಸ್ಪರ್ಧಿಸಿದ್ದ ಎಲ್ಲ ಕ್ಷೇತ್ರಗಳಲ್ಲಿ ಸೋಲು ಕಂಡಿದೆ. ಕಾಂಗ್ರೆಸ್ ಕೂಡ ಕಡಿಮೆ ಕ್ಷೇತ್ರಗಳನ್ನು (37) ಗೆದ್ದಿದೆ. ಪರಿಣಾಮ ಬಿಜೆಪಿ ಸತತ ಮೂರನೇ ಬಾರಿಗೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.