ಬದಿಯಡ್ಕ: ಸದಸ್ಯರೆಲ್ಲರೂ ಸದಾ ಕ್ರೀಯಾಶೀಲರಾಗಿದ್ದಾಗ ಸಂಘಟನೆ ಬಲಿಷ್ಠವಾಗುತ್ತದೆ. ನಮ್ಮ ಯಾವುದೇ ಬೇಡಿಕೆಗಳ ಈಡೇರಿಕೆಗೆ ನಾವೆಲ್ಲ ಒಗ್ಗಟ್ಟಿನಿಂದ ಮುಂದುವರಿದಾಗ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಮುಂದೆ ಬರುವ ಜಿಲ್ಲಾ ಸಮ್ಮೇಳನದ ಯಶಸ್ವಿಗಾಗಿ ಶ್ರಮಿಸಬೇಕು ಎಂದು ಕೆಎಸ್‍ಪಿಎಸ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಬಿ. ನಾಗರಾಜ್ ಕರೆನೀಡಿದರು.
ಶನಿವಾರ ಪೆರಡಾಲ ನವಜೀವನ ವಿದ್ಯಾಲಯದಲ್ಲಿ ಜರಗಿದ ಕೇರಳ ರಾಜ್ಯ ಪೆನ್ಶನರ್ಸ್ ಸಂಘದ ಬದಿಯಡ್ಕ ಘಟಕದ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬದಿಯಡ್ಕ ಘಟಕ ಅಧ್ಯಕ್ಷ ಎಂ. ನಾರಾಯಣ ಭಟ್ ಮೈರ್ಕಳ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಅಧ್ಯಕ್ಷ ಚಂದ್ರಶೇಖರ ರೈ ಮಾತನಾಡಿದರು. ಇದೇ ಸಂದರ್ಭದಲ್ಲಿ ಹೊಸದಾಗಿ ಸಂಘಟನೆಗೆ ಸೇರ್ಪಡೆಗೊಂಡ ಶ್ಯಾಮ ಭಟ್ ಕುತ್ತಗುಡ್ಡೆ ಹಾಗೂ ಟಿ.ಕೇಶವ ಭಟ್ ಇವರನ್ನು ಶಾಲು ಹೊದೆಸಿ ಸ್ವಾಗತಿಸಲಾಯಿತು. 2024-25ನೇ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಬದಿಯಡ್ಕ ಘಟಕ ಕಾರ್ಯದರ್ಶಿ ಉದನೇಶವೀರ ಕಿಳಿಂಗಾರು ಸ್ವಾಗತಿಸಿ, ನೂತನವಾಗಿ ಆಯ್ಕೆಯಾದ ಕಾರ್ಯದರ್ಶಿ ವೆಂಕಟ್ರಾಜ ಸಿ.ಎಚ್. ವಂದಿಸಿದರು. ವಿಶಾಲಾಕ್ಷಿ ಕುಳಮರ್ವ ಹಾಗೂ ಜಯಶ್ರೀ ಬದಿಯಡ್ಕ ಪ್ರಾರ್ಥನೆ ಹಾಡಿದರು.