ಕುಂಬಳೆ: ಸಂಗೀತ ಭಗವಂತ ಹಾಗೂ ಭಕ್ತನನ್ನು ಹೆಣೆಯುವ ಅತ್ಯುತ್ತಮ ಮಾಧ್ಯಮ. ಸಂಗೀತದಲ್ಲಿರುವ ಮಾಧುರ್ಯ ಹಾಗೂ ಆ ಕೃತಿಯಲ್ಲಿ ಹುದುಗಿರುವ ಸಾಹಿತ್ಯದ ಸೌಂದರ್ಯವು, ಪವಾಡಸದೃಶವಾಗಿ ಕಾರ್ಯವೆಸಗಿ ಕಲಾವಿದನ ಹಾಗೂ ಕೇಳುಗನ ಮನದಾಳದಲ್ಲಿ ಭಗವಂತನ ಕುರಿತಾದ ಪೂಜ್ಯ ಭಾವನೆಯನ್ನು ಬಿಂಬಿಸುತ್ತದೆ. ಸಂಗೀತಕ್ಕೆ ಮರುಳಾಗದ ಜೀವಿಗಳೇ ಇಲ್ಲ. ಅಂತಹ ಸಂಗೀತವು ಭಕ್ತಿಗೀತೆಯಾಗಿರಬಹುದು, ಭಾವಗೀತೆಯಾಗಿರಬಹುದು, ಜಾನಪದ ಗೀತೆಯಾಗಿರಬಹುದು. ಅದರಲ್ಲಿರುವ ಸಾಹಿತ್ಯ ಹಾಗೂ ಸಂಗೀತಗಳೆರಡೂ ಎರಡು ಕಣ್ಣುಗಳಷ್ಟೇ ಪ್ರಧಾನ, ಅಂತಹ ಗೀತೆಗಳನ್ನು ಸ್ವತಃ ಕಲಿಯುವುದಕ್ಕಿಂತ ಇಂತಹ ಶಿಬಿರಗಳ ಮೂಲಕ ಕಲಿಯುವುದರಿಂದ ಪ್ರಬುದ್ಧತೆ ಹೆಚ್ಚಾಗುತ್ತದೆ ಎಂದು ಖ್ಯಾತ ಚಿತ್ರನಟ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ವಿ. ಮನೋಹರರವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡಿನ ಪ್ರಸಿದ್ಧ ಕಲಾಸಂಸ್ಥೆ ರಂಗಚಿನ್ನಾರಿ ಸಾರಥ್ಯದಲ್ಲಿ ಸ್ಥಳೀಯ ಭಕ್ತಿರಸ ಸಮಿತಿಯ ಸಮರ್ಥ ಸಹಯೋಗದಲ್ಲಿ, ಕರ್ನಾಟಕ ಸಂಸ್ಕøತಿ ಇಲಾಖೆ ನೆರವಿನೊಂದಿಗೆ ಅಂತರ್ ರಾಷ್ಟ್ರೀಯ ಖ್ಯಾತಿಯ ಗಾಯಕ ಶಂಕರ ಶಾನುಭೋಗ್ ಕಳಸ ಇವರ ನೇತೃತ್ವದಲ್ಲಿ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಭಕ್ತಿ-ಭಾವಗೀತೆಗಳ ಕಲಿಕಾ ಕಾರ್ಯಾಗಾರವನ್ನು ದೀಪ ಬೆಳಗಿಸಿ ಉದ್ಘಾಟಿಸುತ್ತಾ ಅವರು ಮಾತನಾಡಿದರು.
ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕ ಕೆ ಮಾಧವ ಅಡಿಗ ಅಧ್ಯಕ್ಷತೆ ವಹಿಸಿದ್ದ ಉದ್ಘಾಟನಾ ಸಭೆಯಲ್ಲಿ ಅತಿಥಿಯಾಗಿ ಖ್ಯಾತ ಹಿಂದೂಸ್ಥಾನಿ ಗಾಯಕಿ ಶಾಂತೇರಿ ಕಾಮತ್ ಭಾಗವಹಿಸಿದ್ದರು. ರಂಗಚಿನ್ನಾರಿ ಸಂಸ್ಥೆಯ ನಿರ್ದೇಶಕ ಕಾಸರಗೋಡು ಚಿನ್ನಾ ಪ್ರಾಸ್ಥಾವಿಕವಾಗಿ ಮಾತನಾಡಿ ಕಾರ್ಯಾಗಾರದ ಸದುದ್ಧೇಶಗಳನ್ನು ವಿವರಿಸಿ, ಅತಿಥಿಗಳನ್ನು ಸ್ವಾಗತಿಸಿದರು. ಪ್ರೇಮಾ ಶೆಟ್ಟಿ ವಂದಿಸಿದರು. ಕುಮಾರಿ ವೈಭವಿ ಶಂನಾಡಿಗ ಪ್ರಾರ್ಥನೆ ಹಾಡಿದರು. ಭಕ್ತಿರಸ ಸಮಿತಿಯ ಕಾರ್ಯಾಧ್ಯಕ್ಷ ಕಲಾರತ್ನ ಶಂನಾಡಿಗ ಕುಂಬಳೆ ಕಾರ್ಯಕ್ರಮ ನಿರೂಪಿಸಿದರು. ರಂಗಚಿನ್ನಾರಿ ಹಾಗೂ ಭಕ್ತಿರಸ ಸಮಿತಿಯ ಆಹ್ವಾನದಂತೆ ಕಾಸರಗೋಡು, ಹಾಗೂ ದಕ್ಷಿಣಕನ್ನಡ ಜಿಲ್ಲೆ ಮಾತ್ರವಲ್ಲದೇ ಭಟ್ಕಳದಿಂದಲೂ 650 ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಶಿಬಿರಾರ್ಥಿಗಳು ಕಣಿಪುರ ದೇಗುಲದಂಗಳದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಬೆಳಗ್ಗಿನಿಂದ ಸಂಜೆಯ ತನಕ ಸ್ಥಳದಲ್ಲೇ ಉಪಸ್ಥಿತರಿದ್ದು, ಶ್ರೀ ಶಂಕರ ಶಾನುಭೋಗ್ ಅವರು ಸರಳ ರೂಪದಿಂದ ಕಲಿಸಿದ ನಾಲ್ಕು ಹಾಡುಗಳನ್ನು ಕಲಿತು ಶಿಬಿರವನ್ನು ಯಶಸ್ವಿಗೊಳಿಸಿದರು.