ಬಹರಾಯಿಚ್ : ದುರ್ಗಾ ದೇವಿಯ ಮೂರ್ತಿಯ ಮೆರವಣಿಗೆ ವೇಳೆ ಉಂಟಾದ ಕೋಮು ಹಿಂಸಾಚಾರದಿಂದ 22 ವರ್ಷದ ಒಬ್ಬ ವ್ಯಕ್ತಿಯು ಮೃತಪಟ್ಟಿದ್ದು, ಬಹರಾಯಿಚ್‌ನಲ್ಲಿ ಸೋಮವಾರ ಪರಿಸ್ಥಿತಿ ಬಿಗಡಾಯಿಸಿದೆ. ಪ್ರಕ್ಷುಬ್ಧ ಜನಸಮೂಹವು ಕಬ್ಬಿಣದ ಸಲಾಕೆಗಳನ್ನು ಹಿಡಿದುಕೊಂಡು ವಾಹನಗಳನ್ನು ಜಖಂಗೊಳಿಸಿ, ಅಂಗಡಿಗಳಿಗೂ ಬೆಂಕಿ ಹಚ್ಚಿದ್ದಾರೆ.
ಮುಸಲ್ಮಾನರು ಬಹುಸಂಖ್ಯಾತರಾಗಿರುವ ಮಹಾರಾಜ್‌ಗಂಜ್ ಪಟ್ಟಣದ ಮನ್ಸೂರ್ ಗ್ರಾಮದಲ್ಲಿ ಭಾನುವಾರ ರಾತ್ರಿ ದುರ್ಗಾ ಪ್ರತಿಮೆಯ ವಿಸರ್ಜನೆಗೆ ಮೆರವಣಿಗೆಯಲ್ಲಿ ಕರೆದೊಯ್ಯುವ ವೇಳೆ ಡಿ.ಜೆ. ನುಡಿಸಲು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಎರಡು ಕಡೆಗಳಲ್ಲಿ ಗಲಾಟೆ ನಡೆಯಿತು.
ಹತ್ತಿರದ ಮನೆಗಳಿಂದ ದುರ್ಗಾ ಪ್ರತಿಮೆ ಮೇಲೆ ಕಲ್ಲುತೂರಾಟ ನಡೆಸಿದ್ದರಿಂದ ಮೂರ್ತಿ ಜಖಂಗೊಂಡಿತು. ಈ ವೇಳೆ ಗುಂಡಿನ ದಾಳಿ ನಡೆದಿದ್ದರಿಂದ ಮೆರವಣಿಗೆಯಲ್ಲಿ ಸಾಗುತ್ತಿದ್ದ ರಾಮ್ ಗೋಪಾಲ್ ಮಿಶ್ರಾಗೆ ಗುಂಡು ತಗುಲಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ನೀಡುವ ವೇಳೆ ಮೃತಪಟ್ಟರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಮಿಶ್ರಾ ಸಾವಿನ ಬಳಿಕ ಕೋಮು ಹಿಂಸಾಚಾರಗಳು ನಡೆದವು. ಪಖಾರ್‌ಪುರ್ ಪಟ್ಟಣ ಸೇರಿದಂತೆ ವಿವಿಧೆಡೆಗಳಲ್ಲಿ ಮೆರವಣಿಗೆಯನ್ನು ರದ್ದುಗೊಳಿಸಲಾಯಿತು.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಸಲ್ಮಾನ್ ಸೇರಿದಂತೆ 25 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಹಾರ್ದಿ ಪೊಲೀಸ್ ಠಾಣಾಧಿಕಾರಿ ಸೇರಿದಂತೆ ಇಬ್ಬರನ್ನು ಸರ್ಕಾರ ಅಮಾನತುಗೊಳಿಸಿದೆ.
ಪ್ರತಿಭಟನೆ: ಪೊಲೀಸ್ ಇಲಾಖೆ ಸೇರಿದಂತೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ವಿವಿಧೆಡೆ ಪ್ರತಿಭಟನೆಗಳು ನಡೆದವು. ಜನರಲ್ಲಿ ಧೈರ್ಯ ತುಂಬುವ ದೃಷ್ಟಿಯಿಂದ ಪೊಲೀಸರು ಪೆರೇಡ್ ನಡೆಸಿದರು. ಮನೆ, ಅಂಗಡಿ ಹಾಗೂ ವಾಹನಗಳಿಗೆ ಬೆಂಕಿ ಬಿದ್ದಿದ್ದರಿಂದ ಸ್ಥಳದಲ್ಲಿ ದಟ್ಟಣೆಯ ಹೊಗೆ ಆವರಿಸಿದೆ.
ಗೃಹ ಕಾರ್ಯದರ್ಶಿ ಸಂಜೀವ್ ಗುಪ್ತಾ, ಎಡಿಜಿಪಿ (ಕಾನೂನು ಹಾಗೂ ಸುವ್ಯವಸ್ಥೆ) ಅಮಿತಾಬ್ ಯಶ್ ಅವರು ಘಟನಾ ಸ್ಥಳಕ್ಕೆ ತಲುಪಿದ್ದು, ಪರಿಸ್ಥಿತಿ ಪರಾಮರ್ಶೆ ನಡೆಸಿದ್ದಾರೆ.
'ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೃಂದಾ ಶುಕ್ಲಾ ತಿಳಿಸಿದ್ದಾರೆ.
ಈ ಕುರಿತು 'ಎಕ್ಸ್'ನಲ್ಲಿ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ,'ಉತ್ತರಪ್ರದೇಶದ ಶಾಂತಿ ಹಾಗೂ ಸೌಹಾರ್ದತೆಯ ಕದಡುವ ಯಾವುದೇ ಪ್ರಯತ್ನಗಳಿಗೂ ಯಶಸ್ಸು ಸಿಗುವುದಿಲ್ಲ. ಗಲಭೆಕೋರರನ್ನು ರಕ್ಷಿಸುವವರು ಮತ್ತೊಮ್ಮೆ ಸಕ್ರಿಯವಾಗಿದ್ದು, ಅಂತಹವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು' ಎಂದು ಎಚ್ಚರಿಕೆ ನೀಡಿದ್ದಾರೆ.
'ಬಹರಾಯಿಚ್‌ನಲ್ಲಿ ನಡೆದ ಹಿಂಸಾಚಾರದ ಕುರಿತಂತೆ ಸುದ್ದಿ ಕೇಳಿ ತೀವ್ರ ಬೇಸರಗೊಂಡಿದ್ದು, ಆಡಳಿತ ವ್ಯವಸ್ಥೆಯು ನಿರ್ಲಕ್ಷ್ಯ ವಹಿಸಿದ್ದು ದುರದೃಷ್ಟಕರ' ಎಂದು ಕಾಂಗ್ರೆಸ್‌ನ ಹಿರಿಯ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಅವರು 'ಎಕ್ಸ್'ನಲ್ಲಿ ತಿಳಿಸಿದ್ದಾರೆ.
'ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರವು ತಕ್ಷಣವೇ ಜನರನ್ನು ವಿಶ್ವಾಸಕ್ಕೆ ಪಡೆದುಕೊಂಡು, ಹಿಂಸಾಚಾರವನ್ನು ಕೊನೆಗೊಳಿಸಲು ಪ್ರಯತ್ನಿಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕು. ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡಬಾರದು' ಎಂದು ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆಯ ಮಾಹಿತಿ ಪಡೆದುಕೊಖಡಿದ್ದು, ನಿಗದಿತ ಸಮಯದಲ್ಲಿಯೇ ಮೂರ್ತಿಗಳ ವಿಸರ್ಜನೆಗೆ ಅವಕಾಶ ಮಾಡಿಕೊಡಬೇಕು. ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಬೇಕು' ಎಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.