ನವದೆಹಲಿ: ಸರ್ಜನ್ ವೈಸ್ ಅಡ್ಮಿರಲ್ ಆರತಿ ಸರೀನ್ ಅವರು ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ (ಎಎಫ್‌ಎಂಎಸ್) ಮಹಾನಿರ್ದೇಶಕರಾಗಿ ಮಂಗಳವಾರ ನೇಮಕಗೊಂಡರು. ಈ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಗೌರವ ಅವರಿಗೆ ಒಲಿದಿದೆ.
ಸಶಸ್ತ್ರ ಪಡೆಗಳ ಒಟ್ಟಾರೆ ವೈದ್ಯಕೀಯ ನೀತಿಗೆ ಸಂಬಂಧಿಸಿದ ವಿಷಯಗಳಿಗೆ ಎಎಫ್‌ಎಂಎಸ್ ಮಹಾನಿರ್ದೇಶಕರು ನೇರವಾಗಿ ರಕ್ಷಣಾ ಸಚಿವಾಲಯಕ್ಕೆ ಹೊಣೆಗಾರರಾಗಿರುತ್ತಾರೆ.
ಪುಣೆಯಲ್ಲಿರುವ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಲ್ಲಿ (ಎಎಫ್‌ಎಂಸಿ) ವ್ಯಾಸಂಗ ಮಾಡಿರುವ ಆರತಿ, 1985ರಲ್ಲಿ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗೆ ನಿಯೋಜನೆಗೊಂಡಿದ್ದರು.
'46ನೇ ಡಿಜಿಎಎಫ್‌ಎಂಎಸ್ ಆಗಿ ನೇಮಕಗೊಳ್ಳುವ ಮುನ್ನ ಆರತಿ ಅವರು ನೌಕಾಪಡೆ ಮತ್ತು ವಾಯುಪಡೆಯ ವೈದ್ಯಕೀಯ ಸೇವೆಗಳ ಮಹಾನಿರ್ದೇಕರ ಹುದ್ದೆ ಹಾಗೂ ಪುಣೆಯ ಎಎಫ್‌ಎಂಸಿಯ ನಿರ್ದೇಶಕರು ಮತ್ತು ಕಮಾಂಡೆಂಟ್ ಹುದ್ದೆಯನ್ನು ನಿಭಾಯಿಸಿದ್ದಾರೆ' ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.
'ಪುಣೆಯ ಎಎಫ್‌ಎಂಸಿಯಲ್ಲಿ ರೇಡಿಯೊ ಡಯಾಗ್ನಸಿಸ್ ವಿಷಯದಲ್ಲಿ ಎಂ.ಡಿ ಮತ್ತು ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ರೇಡಿಯೇಷನ್ ಆಂಕಾಲಜಿ ವಿಷಯದಲ್ಲಿ ಡಿಪ್ಲೊಮೇಟ್ ನ್ಯಾಷನಲ್ ಬೋರ್ಡ್ (ಡಿಎನ್‌ಬಿ) ಪದವಿ ಪಡೆದಿರುವ ಅವರು ಪಿಟ್ಸ್‌ಬರ್ಗ್ ವಿ.ವಿಯಲ್ಲಿ ಗಾಮಾ ನೈಫ್ ಸರ್ಜರಿಯಲ್ಲಿ ತರಬೇತಿ ಪಡೆದಿದ್ದಾರೆ' ಎಂದು ಹೇಳಿದೆ.
'38 ವರ್ಷಗಳ ವೃತ್ತಿಜೀವನದಲ್ಲಿ ಶೈಕ್ಷಣಿಕ ಮತ್ತು ಆಡಳಿತಕ್ಕೆ ಸಂಬಂಧಿಸಿದ ವಿವಿಧ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಪುಣೆಯ ಆರ್ಮಿ ಹಾಸ್ಪಿಟಲ್ ಮತ್ತು ಕಮಾಂಡ್ ಹಾಸ್ಪಿಟಲ್‌ನಲ್ಲಿ ರೇಡಿಯೇಷನ್ ಆಂಕಾಲಜಿ ವಿಭಾಗದ ಮುಖ್ಯಸ್ಥರಾಗಿ, ಮುಂಬೈನ ಐಎನ್‌ಎಚ್‌ಎಸ್ ಆಶ್ವಿನಿ ಆಸ್ಪತ್ರೆಯಲ್ಲಿ ಕಮಾಂಡಿಗ್ ಆಫೀಸರ್ ಆಗಿ ಮತ್ತು ಭಾರತೀಯ ವಾಯುಪಡೆಯ ದಕ್ಷಿಣ ಮತ್ತು ಪಶ್ಚಿಮ ನೇವಲ್ ಕಮಾಂಡ್‌ನ ಕಮಾಂಡ್ ಮೆಡಿಕಲ್ ಆಫೀಸರ್ ಆಗಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ' ಎಂದು ವಿವರಿಸಿದೆ.
ಆರತಿ ಅವರಿಗೆ 2021ರಲ್ಲಿ 'ವಿಶಿಷ್ಟ ಸೇವಾ' ಪದಕ ಮತ್ತು 2024ರಲ್ಲಿ 'ಅತಿ ವಿಶಿಷ್ಟ ಸೇವಾ' ಪದಕ ನೀಡಿ ಗೌರವಿಸಲಾಗಿದೆ.