ನವದೆಹಲಿ: ಎಲ್ಲಾ ಮಾದರಿಯ ಪಟಾಕಿಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಗೆ ನಿಷೇಧ ವಿಧಿಸಿರುವ ದೆಹಲಿ ಸರ್ಕಾರ, 2025ರ ಜನವರಿ 1ರವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ಹೇಳಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪರಿಸರ ಸಚಿವ ಗೋಪಾಲ್ ರೈ, ವಾಯುಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರವನ್ನು ತೆಗದುಕೊಂಡಿದ್ದು, ಜನರು ಈ ಆದೇಶವನ್ನು ಪಾಲಿಸಬೇಕೆಂದು ವಿನಂತಿಸಿದ್ದಾರೆ.
ಚಳಿಗಾಲದಲ್ಲಿ ಹೆಚ್ಚುವ ವಾಯುಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಈ ಸೂಚನೆಯನ್ನು ನೀಡಿದೆ. ಈ ಆದೇಶವನ್ನು ಪಾಲಿಸದವರ ವಿರುದ್ಧ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯು ಕ್ರಮ ಕೈಗೊಳ್ಳಲಿದೆ ಎಂದೂ ರೈ ಹೇಳಿದ್ದಾರೆ.
ಆನ್‌ಲೈನ್ ಮಾರಾಟ ಸೇರಿದಂತೆ ಎಲ್ಲಾ ಪಟಾಕಿಗಳ ಮಾರಾಟ ಮತ್ತು ಬಳಕೆಗೆ ನಿಷೇಧ ಹೇರಿದ್ದು, ಈ ಆದೇಶವನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ರೈ ತಿಳಿಸಿದ್ದಾರೆ.
ಚಳಿಗಾಲದಲ್ಲಿ ತಾಪಮಾನ ಕಡಿಮೆ ಇರುವುದರಿಂದ ಮಾಲಿನ್ಯ ಹೆಚ್ಚಾಗುತ್ತದೆ. ಇಂದು ಸಹ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿದ್ದು, ಎಕ್ಯೂಐ ಸೂಚ್ಯಂಕದಲ್ಲಿ ಕಳಪೆ ವಾಯುಗುಣಮಟ್ಟ ದಾಖಲಾಗಿದೆ ಎಂದು ರೈ ಹೇಳಿದ್ದಾರೆ.