ಕಾಸರಗೋಡು: ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಗೆ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ಲಭ್ಯವಿದ್ದು, ಉದ್ದಿಮೆದಾರರು ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಿಳಿಸಿದ್ದಾರೆ.
ಅವರು ಕಾಸರಗೋಡು ಸಿಪಿಸಿಆರ್‍ಐನ ಪಿ.ಜೆ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಕಯರ್ ಬೋರ್ಡ್ ಆಯೋಜಿಸಲಾಗಿದ್ದ ಹುರಿಹಗ್ಗ ಮತ್ತು ಅವುಗಳ ವೈವಿಧ್ಯಮಯ ಉತ್ಪನ್ನಗಳ ಅಭಿವೃದ್ಧಿ ಕಾರ್ಯಾಗಾರ ಹಾಗೂ ತೆಂಗಿನ ಉತ್ಪನ್ನಗಳ ಕಿರು ಉದ್ಯಮಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಉದ್ದಿಮೆದಾರರಿಗೆ ಜಿಲ್ಲಾ ಪಂಚಾಯಿತಿ ಎಲ್ಲ ರೀತಿಯ ಸಹಕಾರ ಒದಗಿಸಿಕೊಡಲಿದೆ. ಜಿಲ್ಲೆಯಲ್ಲಿ ಗಣನೀಯವಾಗಿ ತೆಂಗು ಬೆಳೆಯಲಾಗುತ್ತಿದ್ದು, ತೆಂಗಿನ ನಾರು ಸೇರಿದಂತೆ ವಿವಿಧ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಹಾಳಾಗುತ್ತಿದೆ. ತೆಂಗಿನ ನಾರಿನ ಉದ್ದಿಮೆಯಿಂದ ವಿಪುಲ ಉದ್ಯೋಗವಕಾಶ ಲಭ್ಯವಿದ್ದು, ಈ ಬಗ್ಗೆ ಉದ್ದಿಮೆದಾರರು ಕಿರು ಉದ್ದಿಮೆ ಆರಂಭಿಸಲು ಮುಂದೆಬರಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಲಬಾರ್ ಪ್ರದೇಶಗಳಿಗೆ ಹೋಲಿಸಿದಲ್ಲಿ, ಕಾಸರಗೋಡು ಜಿಲ್ಲೆಯಲ್ಲಿ ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳ ಉದ್ದಿಮೆ ಅತ್ಯಂತ ಕಡಿಮೆಯಿದೆ. ಉದ್ದಿಮೆದಾರರು ಮುಂದೆ ಬಂದಲ್ಲಿ ಅನಂತ ಉದ್ಯೋಗವಕಾಶ ಕಲ್ಪಿಸುವುದರ ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು. ನಾರ್ತ್ ಮಲಬಾರ್ ಚೇಂಬರ್ ಆಫ್ ಕಾಮರ್ಸ್ ಕಾಸರಗೋಡು ಚಾಪ್ಟರ್ ಅಧ್ಯಕ್ಷ ಎ.ಕೆ ಶ್ಯಾಮ ಪ್ರಸಾದ್, ಜಿಪಂ ಉಪಾಧ್ಯಕ್ಷ ಶಾನವಾಜ್ ಪಾದೂರ್, ಸಿಪಿಸಿಆರ್‍ಐ ನಿರ್ದೇಶಕ ಬಾಲಚಂದ್ರ ಹೆಬ್ಬಾರ್, ಜಿಲ್ಲಾ ಕೈಗಾರಿಕಾ ಕೇಂದ್ರ ಮಹಾ ಪ್ರಬಂಧಕ ಸಜಿತ್ ಕುಮಾರ್, ನಾರ್ತ್ ಮಲಬಾರ್ ಚೇಂಬರ್ ಆಫ್ ಕಾಮರ್ಸ್ ಕಣ್ಣೂರು ಅಧ್ಯಕ್ಷ ಟಿ.ಕೆ ರಮೇಶ್ ಕುಮಾರ್, ಕಣ್ಣೂರು ಕಯರ್ ಬೋರ್ಡ್ ಯೋಜನಾಧಿಕಾರಿ ಥಾಮಸ್ ಚಾಕೋ, ಕುಟುಂಬಶ್ರೀ ಜಿಲ್ಲಾ ಕೋರ್ಡಿನೇಟರ್ ಟಿ.ಟಿ ಸುರೇಂದ್ರನ್, ಜಿಲ್ಲಾ ಕೈಗಾರಿಕಾ ಕೇಂದ್ರದ ಆಡಳಿತ ಸಹಾಯಕ ಅಬ್ದುಲ್ ಮಜೀದ್ ಕೆಎಎಸ್ ಉಪಸ್ಥೀತರಿದ್ದರು. ಶೈಜು ಟಿ.ಕೆ ಸ್ವಾಗತಿಸಿದರು. ಪ್ರಸಾದ್ ಎಂ.ಎನ್ ವಂದಿಸಿದರು. ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ತಜ್ಷರಿಂದ ತರಗತಿ ನಡೆಯಿತು.
ಕಯರ್ ಬೋರ್ಡ್, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಸಿಪಿಸಿಆರ್‍ಐ, ಮಲಬಾರ್ ಚೇಂಬರ್ ಆಫ್ ಕಾಮರ್ಸ್ ಜಂಟಿ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.