ನ್ಯೂಯಾರ್ಕ್: 'ವಿದೇಶಿ ನೆಲದಲ್ಲಿರುವ ಭಾರತ ವಿರೋಧಿ ಧ್ವನಿಗಳನ್ನು ಹತ್ತಿಕ್ಕಲು ಯತ್ನಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿರುದ್ಧ ಕೆನಡಾ ಮತ್ತು ಅಮೆರಿಕ ಒಗ್ಗಟ್ಟಾಗಿ ಕಠಿಣ ನಿಲುವು ಹೊಂದಬೇಕು' ಎಂದು ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂ ಆರೋಪಿಸಿದ್ದಾರೆ.
'ನನ್ನನ್ನು ಹತ್ಯೆ ಮಾಡಲು ಭಾರತ ಸಂಚು ರೂಪಿಸಿದೆ' ಎಂದು ರಾಯಿಟರ್ಸ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪನ್ನೂ ಆರೋಪಿಸಿದ್ದಾರೆ.
ಪನ್ನೂ ಹತ್ಯೆ ಮಾಡಲು ಭಾರತದ ಇಬ್ಬರು ಪ್ರಜೆಗಳು ಯತ್ನಿಸಿದ್ದರು ಎಂದು ಅಮೆರಿಕದ ನ್ಯಾಯ ವಿಭಾಗವು ದೋಷಾರೋಪಣೆ ಹೊರಿಸಿತ್ತು. ಹತ್ಯೆಗೆ ಯೋಜನೆ ರೂಪಿಸಿದ ವೇಳೆ ಇಬ್ಬರು ಗುಪ್ತಚರ ಇಲಾಖೆಯ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿಸಿತ್ತು.
'ಮೋದಿ ಸರ್ಕಾರವು ವಿದೇಶಿ ನೆಲದಲ್ಲಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಆದರೂ, ಅಮೆರಿಕ, ಕೆನಡಾದ ರಾಯಭಾರಿಗಳು 'ಗುಪ್ತಚರ ಜಾಲ' ವನ್ನು ನಡೆಸುತ್ತಿದ್ದಾರೆ' ಎಂದು ಆರೋಪಿಸಿದರು. ಈ ಕುರಿತು ಯಾವುದೇ ಸಾಕ್ಷಿ ಒದಗಿಸಲು ಪನ್ನೂ ನಿರಾಕರಿಸಿದರು.
'ದೇಶದ ಸಾರ್ವಭೌಮತೆಗೆ ಸವಾಲು ಎಸೆಯುತ್ತಿರುವ ಮೋದಿ ಅವರನ್ನು ಅಮೆರಿಕ, ಕೆನಡಾಕ್ಕೆ ಕಾಲಿಡದಂತೆ ನೋಡಿಕೊಳ್ಳಬೇಕು. ಹಾಗೊಮ್ಮೆ ಬರಬೇಕಿದ್ದರೆ, ದೇಶದ ರಾಯಭಾರ ಕಚೇರಿಗಳನ್ನು ಶಾಶ್ವತವಾಗಿ ಮುಚ್ಚಬೇಕು' ಎಂದು ಈ ವೇಳೆ ಒತ್ತಾಯಿಸಿದ್ದಾರೆ.
ಗುಪ್ತಚರ ಜಾಲದ ಕುರಿತಂತೆ ಹೆಚ್ಚಿನ ವಿವರ ನೀಡಲು ಪನ್ನು ನಿರಾಕರಿಸಿದರು. ಅಮೆರಿಕ ಹಾಗೂ ಕೆನಡಾದಲ್ಲಿರುವ ಸಿಖ್ ಪ್ರತ್ಯೇಕತವಾದಿಗಳು ಇದೇ ರೀತಿಯ ಆರೋಪಗಳನ್ನು ಮಾಡಿದ್ದಾರೆ.
ಪನ್ನೂ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಲು ಭಾರತದ ವಿದೇಶಾಂಗ ಇಲಾಖೆ, ಕೆನಡಾ, ಅಮೆರಿಕದ ಅಧಿಕಾರಿಗಳು ನಿರಾಕರಿಸಿದ್ದಾರೆ. 2020ರಲ್ಲೇ ಗುರುಪತ್ವಂತ್ ಸಿಂಗ್ ಪನ್ನುವನ್ನು ಭಾರತವು ಘೋಷಿತ ಭಯೋತ್ಪಾದಕ ಎಂದು ಘೋಷಿಸಿದೆ.