ಕಾಸರಗೋಡು: ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಹಣ ವಸೂಲಿ ಮಾಡಿ ವಂಚಿಸಿದ ಪ್ರಕರಣದಲ್ಲಿ ಡಿವೈಎಫ್‍ಐ ಕಾಸರಗೋಡು ಜಿಲ್ಲಾ ಸಮಿತಿಯ ಮಾಜಿ ಸದಸ್ಯೆ ಸಚಿತಾ ರೈ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕಾಸರಗೋಡು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ತಿರಸ್ಕರಿಸಿದೆ.
ಕುಂಬಳೆ ಮೂಲದ ನಿಶ್ಮಿತಾ ಶೆಟ್ಟಿ ಎಂಬುವರಿಗೆ ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ 15 ಲಕ್ಷ ರೂಪಾಯಿ ವಸೂಲಿ ಮಾಡಿದ್ದ ಪ್ರಕರಣ ಇದಾಗಿದೆ.
ಬಲ್ತಕಲ್ಲು ಮೂಲದ ಸಚಿತಾ ರೈ ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ(ಸಿ.ಪಿ.ಸಿ.ಆರ್.ಐ) ಸಹಾಯಕ ವ್ಯವಸ್ಥಾಪಕಿ ಕೆಲಸ ಕೊಡಿಸುವುದಾಗಿ ಹೇಳಿ ವಂಚನೆ ಎಸಗಿದ್ದಾರೆ. ಈ ಹಣವನ್ನು ಕರ್ನಾಟಕ ಮೂಲದ ಚಂದ್ರಶೇಖರ ಕೂಳೂರು ಅವರಿಗೆ ಹಸ್ತಾಂತರಿಸಿರುವುದಾಗಿ ಆರೋಪಿ ವಾದಿಸಿದರೂ ನ್ಯಾಯಾಲಯ ಅದನ್ನು ಪರಿಗಣಿಸಲಿಲ್ಲ. ಸಚಿತಾ ರೈ ಮಂಜೇಶ್ವರ ತಾಲೂಕು ಪುತ್ತಿಗೆ ಪಂಚಾಯತಿ ವ್ಯಾಪ್ತಿಯ ಬಾಡೂರಿನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಾರೆ.
ಕುಂಬಳೆ ಕಿದೂರು ಮೂಲದ ನಿಶ್ಮಿತಾ ಶೆಟ್ಟಿ ನೀಡಿದ ದೂರಿನ ಮೇರೆಗೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾಗ ಸಚಿತಾ ರೈ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ನಿಶ್ಮಿತಾ ಶೆಟ್ಟಿ ಹಲವು ಕಂತುಗಳಲ್ಲಿ ಹಣ ಪಾವತಿಸಿದ್ದಾರೆ. ಕೆಲಸ ಸಿಗದ ಹಿನ್ನಲೆಯಲ್ಲಿ ಕೇಂದ್ರೀಯ ಪ್ಲಾಂಟೇಶನ್ ಸಂಶೋಧನಾ ಕೇಂದ್ರದಲ್ಲಿ ತನಿಖೆ ನಡೆಸಿದಾಗ ವಂಚನೆ ನಡೆದಿರುವುದು ಪತ್ತೆಯಾಗಿದ್ದು, ದೂರು ದಾಖಲಾಗಿದೆ. ಸಚಿತಾ ರೈ ವಂಚಿಸಿರುವುದನ್ನು ಪೋಲೀಸರು ಪತ್ತೆ ಮಾಡಿದ್ದಾರೆ.
ಈ ಮಧ್ಯೆ ಡಿವೈಎಫ್ ಐ ಸಕ್ರಿಯ ಕಾರ್ಯಕರ್ತೆಯಾಗಿ, ಎಡಪಕ್ಷದ ಮುಂಚೂಣಿಯ ಯುವ ನೇತಾರೆಯಾದ ಸಚಿತಾ ರೈ ಅವರನ್ನು ರಾಜ್ಯ ಆಡಳಿತ ಚುಕ್ಕಾಣಿ ಹಿಡಿದಿರುವ ಎಡಪಕ್ಷ ಕಾಪಾಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.