ಶ್ರೀನಗರ/ನವದೆಹಲಿ: ಕೇಂದ್ರ ಕಾಶ್ಮೀರದ ಗಾಂದರಬಲ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಕಾರ್ಮಿಕರು ಮೃತಪಟ್ಟಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಪಾಕ್ ವಿರುದ್ಧ ವಿವಿಧ ಪಕ್ಷಗಳ ಮುಖಂಡರು ವಾಗ್ದಾಳಿ ನಡೆಸಿದ್ದಾರೆ.
' ಜಮ್ಮು- ಕಾಶ್ಮೀರದಲ್ಲಿ ಹತ್ಯೆಗಳು ನಿಲ್ಲುವವರೆಗೆ ಭಾರತ ಮತ್ತು ಪಾಕಿಸ್ತಾನ ನಡುವೆ ಯಾವುದೇ ಮಾತುಕತೆ ಸಾಧ್ಯವಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಸೋಮವಾರ ಹೇಳಿದ್ದಾರೆ.
'ಇಸ್ಲಾಮಾಬಾದ್ ಭಾರತದೊಂದಿಗೆ ಸ್ನೇಹ ಸಂಬಂಧ ಹೊಂದಲು ಬಯಸಿದರೆ, ಮೊದಲು ಇಲ್ಲಿ ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ನಿಲ್ಲಿಸಬೇಕು' ಎಂದಿದ್ದಾರೆ.
'ಇದೊಂದು ಬಗೆಹರಿಯದ ಕಗ್ಗಂಟಾಗಿದೆ. 30 ವರ್ಷಗಳಿಂದಲೂ ಇದನ್ನು ನೋಡುತ್ತಿರುವೆ. ಭಯೋತ್ಪಾದನಾ ಚಟುವಟಿಕೆ ನಿಲ್ಲಿಸುವಂತೆ ಹಲವು ಬಾರಿ ಹೇಳಿದ್ದೇವೆ. ಆದರೂ ಅವರ ಆಲೋಚನೆಯೇ ಹಾಗೆ. ಒಂದೆಡೆ ಮುಗ್ಧ ಜನರನ್ನು ಕೊಲ್ಲುತ್ತಾರೆ. ಇನ್ನೊಂದೆಡೆ ಮಾತುಕತೆಗೆ ಆಹ್ವಾನ ನೀಡುತ್ತಾರೆ. ಮೊದಲು ಹತ್ಯೆಗಳನ್ನು ನಿಲ್ಲಿಸಲಿ' ಎಂದರು.
ಶಾಂತಿ ಕದಡಲು ಅಮಾಯಕರ ಹತ್ಯೆ
'ಜಮ್ಮು- ಕಾಶ್ಮೀರದಲ್ಲಿ ಶಾಂತಿ ಕದಡಲು ಪಾಕಿಸ್ತಾನವು ಅಮಾಯಕರ ಹತ್ಯೆ ನಡೆಸುತ್ತಿದೆ' ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ದೂರಿದ್ದಾರೆ.
ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಒದಗಿಸಲು ದಾಳಿ ಕುರಿತಂತೆ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
'ಭಾನುವಾರದ ದುಷ್ಕೃತ್ಯವನ್ನು ನಾವು ಮರೆಯುವುದಿಲ್ಲ. ನೆರೆಯ ದೇಶದಿಂದ ಭಾರತಕ್ಕೆ ಇನ್ನೂ ಬೆದರಿಕೆ ಇದೆ. ಅಮಾಯಕರನ್ನು ರಕ್ಷಿಸಬೇಕಾದರೆ ತಪ್ಪಿತಸ್ಥರನ್ನು ಉಳಿಸಬಾರದು' ಎಂದು ಹೇಳಿದರು.
ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ನಾಯಕಿಅಮಾಯಕರನ್ನು ಕೊಲ್ಲುವುದು ಮಾನವೀಯತೆಯ ವಿರುದ್ಧದ ಅಪರಾಧ. ದೇಶವು ಇದರ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲಿದೆಹೋರಾಟ ನಿಲ್ಲದು: ಅಮಿತ್ ಶಾ
ಜಮ್ಮು ಮತ್ತು ಕಾಶ್ಮೀರ ಈಶಾನ್ಯ ಭಾರತ ಹಾಗೂ ನಕ್ಸಲ್ ಪೀಡಿತ ಪ್ರದೇಶದಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗಿದ್ದರೂ ಭಯೋತ್ಪಾದನೆ ಒಳನುಸುಳುವಿಕೆ ಮತ್ತು ಧಾರ್ಮಿಕ ಉದ್ವಿಗ್ನತೆಯನ್ನು ಸೃಷ್ಟಿಸುವ ಪಿತೂರಿ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಹುತಾತ್ಮ ಪೊಲೀಸರ ಸ್ಮರಣಾರ್ಥ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹುತಾತ್ಮರ ತ್ಯಾಗ ವ್ಯರ್ಥವಾಗುವುದಿಲ್ಲ. 2047ರ ವೇಳೆಗೆ ದೇಶವು ಖಂಡಿತವಾಗಿಯೂ ಸಂಪೂರ್ಣ ಅಭಿವೃದ್ಧಿ ಹೊಂದಲಿದೆ ಎಂದಿದ್ದಾರೆ. ಸವಾಲನ್ನು ಒಡುತ್ತಿರುವ ಮಾದಕ ದ್ರವ್ಯ ಸೈಬರ್ ಅಪರಾಧದ ವಿರುದ್ಧವೂ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಅವರು ಹೇಳಿದರು.