ಕಾಸರಗೋಡು: ಜತೆಯಾಗಿ ವಾಸಿಸುತ್ತಿದ್ದ ಮಹಿಳೆಯ ಕೊಲೆಗೈದು, ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಬಿಜಾಪುರ ಬಬಲೇಶ್ವರ ನಿವಾಸಿ ಹಾಗೂ ಉಪ್ಪಳದ ಕ್ವಾಟ್ರಸ್ ಒಂದರಲ್ಲಿ ವಾಸಿಸುತ್ತಿದ್ದ ಸಂತೋಷ್ ದೊಡ್ಡಮನಿ(40)ಎಂಬಾತನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ಎ. ಮನೋಜ್ ಅವರು ಜೀವಾವಧಿ ಜೈಲುಶಿಕ್ಷೆ ಹಾಗೂ ಎರಡು ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ, ಎರಡು ವರ್ಷಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.
ಕ್ವಾಟ್ರಸ್‍ನಲ್ಲಿ ತನ್ನ ಜತೆ ವಾಸಿಸುತ್ತಿದ್ದ ಉಡುಪಿ ಮೂಲದ ಹುಳಗಮ್ಮ(35)ಎಂಬಾಕೆಯನ್ನು ಸೀರೆಯಿಂದ ಕತ್ತು ಬಿಗಿದು ಕೊಲೆಗೈದ ನಂತರ ಆಕೆ ಮೈಮೇಲಿದ್ದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಇಬ್ಬರೂ ಜತೆಯಾಗಿ ಕ್ವಾಟ್ರಸಲ್ಲಿ ವಾಸ್ತವ್ಯ ಹೂಡಿ, ಕೂಲಿ ಕೆಲಸ ನಿರ್ವಹಿಸುತ್ತಿದ್ದರು. 2013 ಆ.28ರಂದು ಇವರು ವಾಸಿಸುತ್ತಿದ್ದ ಕ್ವಾಟ್ರಸ್‍ನೊಳಗಿಂದ ದುರ್ವಾಸನೆ ಹೊರಬರುತ್ತಿದ್ದ ಹಿನ್ನೆಲೆಯಲ್ಲಿ ಆಸುಪಾಸಿನವರು ಕಟ್ಟಡ ಮಾಲಿಕರಿಗೆ ಮಾಹಿತಿ ನೀಡಿದ್ದು, ಪೊಲೀಸರೊಂದಿಗೆ ಸ್ಥಳಕ್ಕೆ ಬಂದು ನೋಡಿದಾಗ ಹುಳಗಮ್ಮನ ಮೃತದೇಹ ಜೀರ್ಣಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.