ಬೈರೂತ್ : ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ ಬೆನ್ನಲ್ಲೇ, ಇತ್ತ ಇಸ್ರೇಲ್ ಸೇನೆಯನ್ನು ಗುರಿಯಾಗಿಸಿಕೊಂಡು ವಾಯು ದಾಳಿ ನಡೆಸಿದ್ದೇವೆ ಎಂದು ಇರಾನ್ ಬೆಂಬಲಿತ ಬಂಡುಕೋರ ಸಂಘಟನೆ ಹಿಜ್ಬುಲ್ಲಾ ಹೇಳಿಕೊಂಡಿದೆ.
ದಕ್ಷಿಣ ಟೆಲ್ ಅವಿವ್‌ನಲ್ಲಿರುವ ಇಸ್ರೇಲ್ ವಾಯುನೆಲೆ ಮೇಲೆ ಡ್ರೋನ್ ದಾಳಿ ನಡೆಸಿದ್ದೇವೆ ಎಂದು ಹಿಜ್ಬುಲ್ಲಾ ಹೇಳಿದೆ.
ಕಳೆದೊಂದು ತಿಂಗಳಿನಿಂದ ಇಸ್ರೇಲ್ ಮೇಲೆ ಸಮರ ಸಾರಿರುವ ಹಿಜ್ಬುಲ್ಲಾ ಇದೇ ಮೊದಲ ಬಾರಿಗೆ ಇಸ್ರೇಲ್‌ನ ಪ್ರಮುಖ ಪ್ರದೇಶವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾಗಿ ಹೇಳಿಕೊಂಡಿದೆ. ಈ ಹಿಂದೆ ಗಡಿ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿತ್ತು.
ಇದರ ಜೊತೆಗೆ ದಕ್ಷಿಣ ಲೆಬನಾನ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಇಸ್ರೇಲ್ ಪಡೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾಗಿಯೂ ಹಿಜ್ಬುಲ್ಲಾ ಹೇಳಿದೆ. ಇಲ್ಲಿ ಕಳೆದ ಎರಡು ವಾರದಿಂದ ಇಸ್ರೇಲ್ ಪಡೆಗಳು ಬೀಡು ಬಿಟ್ಟಿವೆ.
'ಐತಾ ಅಲ್ ಸಹಾಬ್‌ನ ಹೊರವಲಯದಲ್ಲಿರುವ ಇಸ್ರೇಲ್ ಪಡೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಲಾಗಿದೆ' ಎಂದು ಹಿಜ್ಬುಲ್ಲಾ ಪ್ರಕಟಣೆಯಲ್ಲಿ ತಿಳಿಸಿದೆ.