ಮುಳ್ಳೇರಿಯ| ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಕೀರಿಕ್ಕಾಡು ಸುಬ್ರಹ್ಮಣ್ಯ ಭಟ್ ಸಂಸ್ಮರಣೆ ಶನಿವಾರ ನಡೆಯಿತು.
ಸ್ಥಳ ಸಾನಿಧ್ಯ ಶ್ರೀ ಗೋಪಾಲಕೃಷ್ಣದೇವರಿಗೆ ವಿಶೇಷ ಪೂಜಾರ್ಚನೆ ಸಲ್ಲಿಕೆಯ ಬಳಿಕ ನಡೆದ ಸಂಸ್ಮರಣಾ ಸಭೆಯಲ್ಲಿ ಕಲಾ ಸಂಘದ ಅಧ್ಯಕ್ಷ, ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂದರ್ಭೋಚಿತ ಮಾತುಗಳನ್ನಾಡಿ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿದ್ವಾಂಸ, ಅರ್ಥಧಾರಿ ವೆಂಕಟೇಶ್ ಕುಮಾರ್ ಉಳುವಾನ ಅವರು ಮಾತನಾಡಿ, ಬನಾರಿ ಕಲಾ ಸಂಘದ ಚಟುವಟಿಕೆ, ನಿರಂತರತೆಯನ್ನು ಶ್ಲಾಘೀಸಿದರು. ಸಂಘದ ಹಿರಿಯ ಕಲಾವಿದ ಬೆಳ್ಳಿಪ್ಪಾಡಿ ಸದಾಶಿವ ರೈ ಅವರು ಕೀರ್ತಿಶೇಷ ಕೀರಿಕ್ಕಾಡು ಸುಬ್ರಹ್ಮಣ್ಯ ಭಟ್ಟರ ಸಂಸ್ಮರಣೆಗೈದು ಅವರ ಕಲೋಪಾಸನೆಯ ಶ್ರೀಮಂತಿಕೆಯನ್ನು ಅನಾವರಣಗೊಳಿಸಿದರು. ಕಾರ್ಯಕ್ರಮವನ್ನು ಆಯೋಜಿಸಿದ ಕೀರಿಕ್ಕಾಡು ನಾರಾಯಣ ಭಟ್ ಬಾಳಿಲ ಅವರು ಎಲ್ಲರನ್ನೂ ಅಭಿನಂದಿಸಿ ತನ್ನ ತೀರ್ಥರೂಪರ ಕಲಾ ಜೀವನದ ಪರಿಚಯಾತ್ಮಕ ಕೃತಿಯೊಂದನ್ನು ಪ್ರಕಟಿಸುವ ಯೋಜನೆಯನ್ನು ಸಭೆಯ ಮುಂದಿಟ್ಟು ಮಾತನಾಡಿದರು.
ಭಾಗವತ ಗುರುಗಳಾದ ವಿಶ್ವವಿನೋದ ಬನಾರಿ ಅವರ ಸಂಯೋಜನೆಯಲ್ಲಿ 'ಅತಿಕಾಯ ಮೋಕ್ಷ' ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತಿಕೆಯಲ್ಲಿ ಮೋಹನ ಮೆಣಸಿನಕಾನ ಮತ್ತು ನಿತೀಶ್ ಕುಮಾರ್ ಎಂಕಣ್ಣಮೂಲೆ, ಚೆಂಡೆಮದ್ದಳೆ ವಾದಕರಾಗಿ ಕುಮಾರ ಸುಬ್ರಹ್ಮಣ್ಯ ಭಟ್ ವಳಕುಂಜ, ಮಂಡೆಕೂಲು ಅಪ್ಪಯ್ಯ ಮಣಿಯಾಣಿ, ವಿಷ್ಣು ಶರಣ ಬನಾರಿ, ನಾರಾಯಣ ಪಾಟಾಳಿ ಮಯ್ಯಾಳ, ಶ್ರೀಸ್ಕಂದ ದಿವಾಣ, ಕಲ್ಲಡ್ಕ ಶಿವರಾಮ ಕಲ್ಲೂರಾಯ, ಬಿ. ಎಚ್ ವೆಂಕಪ್ಪ ಗೌಡ ಸಹಕರಿಸಿದರು. ಅರ್ಥಧಾರಿಗಳಾಗಿ ಡಾ. ರಮಾನಂದ ಬನಾರಿ, ದಿವಾಣ ಶಿವಶಂಕರ ಭಟ್, ಡಾ. ಸೂರ್ಯನಾರಾಯಣ ಭಟ್ ಪುತ್ತೂರು, ವೆಂಕಟೇಶ್ ಕುಮಾರ್ ಉಳುವಾನ, ಕೀರಿಕ್ಕಾಡು ಗಣೇಶ್ ಶರ್ಮ, ಯಂ. ರಮಾನಂದ ರೈ ದೇಲಂಪಾಡಿ, ವೀರಪ್ಪ ಸುವರ್ಣ ನಡುಬೈಲು, ಐತಪ್ಪ ಗೌಡ ಮುದಿಯಾರು, ರಾಮ ನಾಯ್ಕ ದೇಲಂಪಾಡಿ ಪಾತ್ರಗಳನ್ನು ನಿರ್ವಹಿಸಿದರು. ಹಿರಿಯ ಯಕ್ಷಗಾನ ಕಲಾವಿದ ಬಾಲಕೃಷ್ಣ ಗೌಡ ದೇಲಂಪಾಡಿ, ಕಲಾರಾಧಕ ಗೋಪಾಲಯ್ಯ ಕೋಟಿಗದ್ದೆ, ಪದ್ಮಾನಾಭರಾವ್ ಮಯ್ಯಾಳ ಸಹಕರಿಸಿದರು. ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಸ್ವಾಗತಿಸಿ, ನಂದ ಕಿಶೋರ ಬನಾರಿ ವಂದಿಸಿದರು. ಪೂಜಾ ಸಿ ಎಚ್. ದೇಲಂಪಾಡಿ ನಿರೂಪಿಸಿದರು.