ಬೈರೂತ್: ಸೂಕ್ತ ಷರತ್ತುಗಳಿಗೆ ಒಳಪಟ್ಟು ಇಸ್ರೇಲ್ ಜೊತೆಗೆ ಯುದ್ಧ ವಿರಾಮಕ್ಕೆ ಸಂಘಟನೆ ಸಿದ್ಧವಿದೆ ಎಂದು ಹಿಜ್ಬುಲ್ಲಾದ ನೂತನ ನಾಯಕ ನಯೀಮ್ ಕಾಸಿಂ ಹೇಳಿದ್ದಾರೆ. ಕಾರ್ಯಸಾಧ್ಯ ಒಪ್ಪಂದವು ಇನ್ನಷ್ಟೇ ಆಗಬೇಕಿದೆ ಎಂದು ಅವರು ಹೇಳಿದ್ದಾರೆ.
ಬೈರೂತ್: ಸೂಕ್ತ ಷರತ್ತುಗಳಿಗೆ ಒಳಪಟ್ಟು ಇಸ್ರೇಲ್ ಜೊತೆಗೆ ಯುದ್ಧ ವಿರಾಮಕ್ಕೆ ಸಂಘಟನೆ ಸಿದ್ಧವಿದೆ ಎಂದು ಹಿಜ್ಬುಲ್ಲಾದ ನೂತನ ನಾಯಕ ನಯೀಮ್ ಕಾಸಿಂ ಹೇಳಿದ್ದಾರೆ. ಕಾರ್ಯಸಾಧ್ಯ ಒಪ್ಪಂದವು ಇನ್ನಷ್ಟೇ ಆಗಬೇಕಿದೆ ಎಂದು ಅವರು ಹೇಳಿದ್ದಾರೆ.
ಮಂಗಳವಾರ ಹಿಜ್ಬುಲ್ಲಾ ಸೆಕ್ರೆಟರಿ ಜನರಲ್ ಆಗಿ ನೇಮವಾದ ಕಾಸೀಂ, ಲೆಬನಾನ್ ಯುದ್ಧ ವಿರಾಮ ಮತ್ತು ಗಾಜಾದಲ್ಲಿ ಹೋರಾಟ ಅಂತ್ಯ ಕುರಿತ ಎರಡು ವಿಷಯಗಳಿಗೆ ಸಂಬಂಧ ಕಲ್ಪಿಸಲಿಲ್ಲ.
'ಆಕ್ರಮಣವನ್ನು ನಿಲ್ಲಿಸಲು ಇಸ್ರೇಲ್ ನಿರ್ಧರಿಸಿದರೆ, ನಾವು ಅದನ್ನು ಒಪ್ಪಿಕೊಳ್ಳುತ್ತೇವೆ. ಅದು ಸೂಕ್ತ ಷರತ್ತುಗಳಿಗೆ ಒಳಪಟ್ಟು ಮಾತ್ರ'ಎಂದು ಹಿಜ್ಬುಲ್ಲಾ ನಾಯಕ ಕಾಸಿಂ ಹೇಳಿದ್ದಾರೆ. ಆದರೆ, ಯುದ್ಧವಿರಾಮಕ್ಕಾಗಿ ನಾವು ಬೇಡುವುದಿಲ್ಲ ಎಂದು ಕಾಸಿಂ ಸ್ಪಷ್ಟಪಡಿಸಿದ್ದಾರೆ.
'ಇಸ್ರೇಲ್ ಒಪ್ಪುವ ಯಾವುದೇ ಒಪ್ಪಂದವನ್ನು ಈವರೆಗೆ ಪ್ರಸ್ತಾಪಿಸಲಾಗಿಲ್ಲ ಮತ್ತು ನಾವು ಆ ಬಗ್ಗೆ ಚರ್ಚಿಸಬೇಕಿದೆ' ಎಂದು ಅವರು ಹೇಳಿದ್ದಾರೆ.
30ಕ್ಕೂ ಅಧಿಕ ವರ್ಷಗಳಿಂದ ಹಿಜ್ಬುಲ್ಲಾ ನಾಯಕನಾಗಿದ್ದ ಹಸನ್ ನಸ್ರಲ್ಲಾನನ್ನು ಇಸ್ರೇಲ್ ದಾಳಿ ನಡೆಸಿ ಕೊಂದ ಬಳಿಕ ಆ ಸ್ಥಾನಕ್ಕೆ ಕಾಸಿಂನನ್ನು ಆಯ್ಕೆ ಮಾಡಲಾಗಿತ್ತು.
'ನಿಮ್ಮ ನಷ್ಟ ತಗ್ಗಿಸಿಕೊಳ್ಳಲು ನಮ್ಮ ಭೂಮಿ ಬಿಟ್ಟು ತೆರಳಿರಿ. ನೀವು ಹಾಗೇ ಮುಂದುವರಿದರೆ, ನೀವು ನಿಮ್ಮ ಜೀವನದಲ್ಲಿ ಎಂದೂ ತೆರದಷ್ಟು ಬೆಲೆ ತೆರಬೇಕಾಗುತ್ತದೆ' ಎಂದು ಇಸ್ರೇಲ್‌ಗೆ ಎಚ್ಚರಿಕೆ ನೀಡಿರುವ ಕಾಸಿಂ, ದಿನಗಳು, ವಾರಗಳು ಮತ್ತು ತಿಂಗಳುಗಟ್ಟಲೆ ಯುದ್ಧ ಮುಂದುವರಿಸಲು ಸಿದ್ಧವಿರುವುದಾಗಿ ಹೇಳಿದ್ಧಾರೆ.
ನಸ್ರಲ್ಲಾ ಸೇರಿದಂತೆ ಹಿಜ್ಬುಲ್ಲಾದ ಹಿರಿಯ ನಾಯಕರನ್ನು ಕೊಂದಿದ್ದು ಅತ್ಯಂತ ನೋವಿನ ಸಂಗತಿ ಎಂದಿದ್ದಾರೆ.
ತಮ್ಮ ಪೂರ್ವಜರು ಹಾಕಿಕೊಟ್ಟ ತಳಹದಿಯ ಆಧಾರದ ಮೇಲೆ ಯುದ್ಧ ತಂತ್ರ ಹೆಣೆಯುವ ಪ್ರತಿಜ್ಞೆಯನ್ನು ಕಾಸಿಂ ಮಾಡಿದ್ದಾರೆ. ನಮ್ಮ ನಾಯಕರು ಆರಂಭಿಸಿದ ಕೆಲಸ ಮುಂದುವರಿಸುವುದೇ ನನ್ನ ಕೆಲಸ ಎಂದಿದ್ದಾರೆ.