ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಕಡೆಗಣಿಸಲಾಯಿತು ಎಂದು ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟದ ಸದಸ್ಯರು ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
' ದೇಶದ ಅತ್ಯಂತ ಹಳೆಯ ಪಕ್ಷದ ನಾಯಕರು ಚುನಾವಣೆಯುದ್ದಕ್ಕೂ ತಮ್ಮನ್ನು ಕಡೆಗಣಿಸಿದರು.
ಉದ್ಧವ್ ಠಾಕ್ರೆ ಬಣದ ಶಿವಸೇನಾ (ಯುಬಿಟಿ) ಪಕ್ಷದ ನಾಯಕರು ಕಾಂಗ್ರೆಸ್ ವಿರುದ್ಧ ಬುಧವಾರ ನೇರ ವಾಗ್ದಾಳಿ ನಡೆಸಿದ್ದಾರೆ. ಒಕ್ಕೂಟದ ಇತರ ಪಕ್ಷಗಳನ್ನು ನಿರ್ಲಕ್ಷಿಸಿದ್ದರ ಪರಿಣಾಮ ಫಲಿತಾಂಶದಲ್ಲಿ ಕಾಣಬಹುದು ಎಂದಿದ್ದಾರೆ.
ಇದೇ ರೀತಿ ಪಶ್ಚಿಮ ಬಂಗಳಾದ ಟಿಎಂಸಿ, ಎಎಪಿ, ಸಿಪಿಐಎಂ, ಸಿಪಿಐ ಕೂಡಾ ಕಾಂಗ್ರೆಸ್ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿವೆ. ಚುನಾವಣೆಯಲ್ಲಿ ಕಾಂಗ್ರೆಸ್ ಒಗ್ಗಟ್ಟಿನಲ್ಲಿ ಕೆಲಸ ಮಾಡಲಿಲ್ಲ. ತನ್ನ ಪಾಡಿಗೆ ತಾನೇ ಚುನಾವಣೆ ನಡೆಸಿತು. ಅದರ ಪರಿಣಾಮದಿಂದ ಹರಿಯಾಣದಲ್ಲಿ ಒಕ್ಕೂಟಕ್ಕೆ ಸೋಲಾಗಿದೆ ಎಂದು ಈ ಪಕ್ಷಗಳು ಮುಖಂಡರು ಆರೋಪಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾ ವಿಕಾಸ ಅಘಾಡಿ (ಎಂವಿಎ) ಜತೆಯಲ್ಲಿ ಹಾಗೂ ಜಾರ್ಖಂಡ್‌ನಲ್ಲಿ ಜೆಎಂಎಂ ಜತೆ ಕಾಂಗ್ರೆಸ್ ಸ್ಪರ್ಧಿಸುತ್ತಿದೆ. ಆದರೆ, ತಾನು ದುರ್ಬಲವಾಗಿರುವ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಆಶ್ರಯ ಪಡೆಯುತ್ತಿರುವ ಕಾಂಗ್ರೆಸ್, ತಾನು ಸಶಕ್ತವಾಗಿರುವ ರಾಜ್ಯಗಳಲ್ಲಿ ಒಕ್ಕೂಟದ ಇತರ ಪಕ್ಷಗಳನ್ನು ಕಡೆಗಣಿಸುತ್ತಿದೆ ಎಂದು ಶಿವಸೇನಾ (ಯುಬಿಟಿ) ಮುಖಂಡ ಸಂಜಯ್ ರಾವುತ್ ದೂರಿದ್ದಾರೆ.
'ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಡಿಯಾ ಒಕ್ಕೂಟ ಜಯ ಸಾಧಿಸಲು ಒಮರ್ ಅಬ್ದುಲ್ಲಾ ಹಾಗೂ ಫಾರೂಕ್ ಅಬ್ದುಲ್ಲಾ ಅವರ ಅವಿರತ ಹೋರಾಟ ಕಾರಣ. ಹರಿಯಾಣದಲ್ಲಿ ತಾವು ಗೆದ್ದೇಬಿಟ್ಟೆವು ಎಂಬ ಆತ್ಮವಿಶ್ವಾಸದಲ್ಲಿದ್ದ ಕಾಂಗ್ರೆಸ್, ಇತರ ಮಿತ್ರ ಪಕ್ಷಗಳನ್ನು ಕಡೆಗಣಿಸಿತು. ಹೂಡಾ ಅವರು ನನ್ನ ಸ್ನೇಹಿತರು. ಆದರೂ ತಮ್ಮ ಸ್ವಂತ ಬಲದಿಂದ ಗೆಲ್ಲುತ್ತೇವೆ ಎಂದುಕೊಂಡಿದ್ದರು' ಎಂದಿದ್ದಾರೆ.
'ಹರಿಯಾಣದಲ್ಲಿ ಸಮಾಜವಾದಿ ಪಾರ್ಟಿ, ಎಎಪಿ ಹಾಗೂ ಶಿವಸೇನೆ ಕೂಡಾ ಒಂದಷ್ಟು ಸೀಟುಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿದ್ದವು. ಅದು ಈಗಿನ ಫಲಿತಾಂಶಕ್ಕಿಂತ ಭಿನ್ನವೇ ಆಗಿರುತ್ತಿತ್ತು' ಎಂದಿದ್ದಾರೆ.
'ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಡದಲ್ಲಿನ ಪರಾಭವದ ನಂತರ ಕಾಂಗ್ರೆಸ್ ಪಕ್ಷ ಇಂಡಿಯಾ ಒಕ್ಕೂಟದ ಪಕ್ಷಗಳನ್ನು ಸಂಪರ್ಕಿಸಿತು. ಶಿವಸೇನಾ (ಯುಬಿಟಿ), ಎನ್‌ಸಿಪಿ (ಶರದ್ ಪವಾರ್), ಜೆಎಂಎಂ ಪಕ್ಷಗಳನ್ನು ಕಾಂಗ್ರೆಸ್ ಭವಿಷ್ಯದಲ್ಲಿ ಕಡೆಗಣಿಸಬಾರದು' ಎಂದು ಹೇಳಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್‌ನ ಒಮರ್ ಅಬ್ದುಲ್ಲಾ ಅವರು ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳುವ ಸಲಹೆ ನೀಡಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ವಕ್ತಾರೆ ಪ್ರಿಯಾಂಕಾ ಕಕ್ಕರ್ ಹೇಳುವ ಮೂಲಕ ಕಾಂಗ್ರೆಸ್‌ಗೆ ಆಘಾತ ನೀಡಿದ್ದಾರೆ.