ಕಾಸರಗೋಡು : ಲೋಕಸಭಾ ಚುನಾವಣೆ ಸಂದರ್ಭ ಕಾಸರಗೋಡು ಜಿಲ್ಲೆಯ ವಿವಿಧ ಸ್ಕ್ವೇಡ್‍ಗಳು ಮತ್ತು ಚುನಾವಣಾ ಬೂತ್‍ಗಳಲ್ಲಿ ವಿಡಿಯೋ ಚಿತ್ರೀಕರಣ ನಡೆಸಿರುವ ವೀಡಿಯೋಗ್ರಾಫರ್‍ಗಳಿಗೆ ತಿಂಗಳುಗಳು ಕಳೆದರೂ ವೇತನ ಪಾವತಿಯಾಗದಿರುವುದರಿಂದ ಸಂಕಷ್ಟ ಎದುರಾಗಿದೆ.
ಪ್ರತಿ ಬಾರಿ ಚುನಾವಣೆ ಸಂದರ್ಭ ಜಿಲ್ಲಾಡಳಿತ ಈ ರೀತಿಯ ಒಂದಲ್ಲ ಒಂದು ಯಡವಟ್ಟು ಮಾಡಿಕೊಂಡೇ ಬರುತ್ತಿದ್ದು, ಈ ಬಾರಿ ವಿಡಿಯೋಗ್ರಾಫರ್‍ಗಳನ್ನು ಯಾಮಾರಿಸತೊಡಗಿದೆ. ಈ ಹಿಂದೆ ಚುನಾವಣಾ ಕರ್ತವ್ಯಕ್ಕಾಗಿ ತೆರಳುವ ವಾಹನ ಚಾಲಕರ ವೇತನ ಪಾವತಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದರೆ, ಇದಕ್ಕೂ ಮುನ್ನ ಚುನಾವಣಾ ಕರ್ತವ್ಯಕ್ಕೆ ಬಳಸುವ ವಾಹನಗಳ ಬಾಡಿಗೆ ವಿಚಾರದಲ್ಲೂ ಇಂತಹ ವಿಳಂಬ ಧೋರಣೆ ಕಂಡುಬಂದಿತ್ತು. ನಂತರ ಸುದೀರ್ಘ ಹೋರಾಟದ ನಂತರ ಹಣ ಬಿಡುಗಡೆಗೊಂಡಿತ್ತು.
ಬೀದಿಗಿಳಿದ ವಿಡಿಯೋಗ್ರಾಫರ್ಸ್:
ಚುನಾವಣೆ ಸಂದರ್ಭ ಮೂರು ತಿಂಗಳಿಗೂ ಹೆಚ್ಚುಕಾಲ ಜಿಲ್ಲೆಯಲ್ಲಿ ಸುಮಾರು 1,600 ಮಂದಿ ವಿವಿಧ ಇಲಾಖೆಗಳಲ್ಲಾಗಿ ಕರ್ತವ್ಯ ನಿರ್ವಹಿಸಿದ್ದು, ಸುಮಾರು 45 ಲಕ್ಷ ರೂಪಾಯಿ ಮೊತ್ತ ವೇತನ ರೂಪದಲ್ಲಿ ಅಖಿಲ ಕೇರಳ ಫೋಟೋಗ್ರಾಫರ್ಸ್ ಒಕ್ಕೂಟ(ಎಕೆಪಿಎ) ಸದಸ್ಯರಿಗೆ ಲಭಿಸಲು ಬಾಕಿಯಿದೆ. ಕಣ್ಣೂರು ಕಾಸರಗೋಡು ಜಿಲ್ಲೆಗಳಲ್ಲಿ ಈ ಉದ್ದೇಶಕ್ಕಾಗಿ ಹಣ ಮಂಜೂರು ಮಾಡಲಾಗಿದ್ದರೂ, ಈಗ ಅಧಿಕಾರಿಗಳು ಖಜಾನೆ ನಿಯಂತ್ರಣದ ಕಾರಣ ಮುಂದೊಡ್ಡಿ ಹಣ ನೀಡಲು ಹಿಂದೇಟುಹಾಕುತ್ತಿದ್ದಾರೆ. ಕೇರಳದಾದ್ಯಂತ ಚುನಾವಣೆಗೆ ಸಂಬಂಧಿಸಿ ನೂರಾರು ಮಂದಿ ವಿಡಿಯೋಗ್ರಾಫರ್‍ಗಳನ್ನು ತಿಂಗಳುಗಳ ಕಾಲ ದುಡಿಸಿ, ಅವರಿಗೆ ವೇತನ ಪಾವತಿಸದೆ ಅಲೆದಾಡಿಸುವಂತೆ ಮಾಡುತ್ತಿರುವ ಅಧಿಕಾರಿ ವರ್ಗದ ಧೋರಣೆ ಬಗ್ಗೆ ಅಖಿಲ ಕೇರಳ ಫೋಟೋಗ್ರಾಫರ್ಸ್ ಸಂಘಟನೆ ಬೀದಿಗಿಒಳಿದು ಹೋರಾಟ ನಡೆಸಲು ಮುಂದಾಗಿದೆ. ಚುನಾವಣೆ ಸಂದರ್ಭ ಮೂರು ತಿಂಗಳ ಕಾಲ ಜಿಲ್ಲೆಯ ವಿವಿಧೆಡೆ ಪ್ರತಿಯೊಬ್ಬ ವೀಡಿಯೋಗ್ರಾಫರ್ ಹಗಲಿರುಳು ದುಡಿದು ವೇತನ ಇಂದಲ್ಲ ನಾಳೆ ಕೈಸೇರಬಹುದೆಂಬ ಭರವಸೆಯಲ್ಲಿ ಪ್ರಯಾಣ ಹಾಗೂ ಊಟದ ಮೊತ್ತವನ್ನು ಸ್ವತ: ಕೈಯಿಂದ ಖರ್ಚುಮಾಡಿದ್ದಾರೆ. ಇವರಲ್ಲಿ ಕೆಲವರು ವಿಡಿಯೋಗ್ರಾಫರ್‍ಗಳು ಸ್ಟುಡಿಯೋ ಬಾಡಿಗೆ ಕಟ್ಟಲಾಗದೆ, ಕ್ಯಾಮರಾ ಸಮೇತ ತೆಗೆದುಕೊಂಡ ಸಾಲದ ಇಎಂಐ ಪಾವತಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ವೇತನ ಹಿಡಿದಿಟ್ಟುಕೊಂಡಿರುವ ಕ್ರಮ ಖಂಡನೀಯ. ವೇತನ ಬಿಡುಗಡೆಗೆ ಆಗ್ರಹಿಸಿ ಮೊದಲ ಹಂತದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅ. 5ರಂದು ಧರಣಿ ಹಮ್ಮಿಕೊಳ್ಳಲಾಗುವುದು. ಸೂಕ್ತ ನಿರ್ಧಾರ ಕೈಗೊಳ್ಳದಿದ್ದಲ್ಲಿ ರಾಜ್ಯ ಸಮಿತಿ ನೇತೃತ್ವದಲ್ಲಿ ಎಲ್ಲ 14 ಜಿಲ್ಲೆಗಳ ಸದಸ್ಯರೊಂದಿಗೆ ಸೇರಿ ರಾಜ್ಯಮಟ್ಟದಲ್ಲಿ ಆಂದೋಲನ ಹಮ್ಮಿಕೊಳ್ಳುವುದಾಗಿ ಎಕೆಪಿಎ ಪದಾಧಿಕಾರಿಗಳು ತಿಳಿಸಿದ್ದಾರೆ.