ಒಟ್ಟಾವ: ಭಾರತ ಮತ್ತು ಕೆನಡಾ ರಾಜತಾಂತ್ರಿಕ ಸಂಘರ್ಷದ ನಡುವೆ, ಕೆನಡಾದ ಆಡಳಿತಾರೂಢ ಲಿಬರಲ್ ಪಕ್ಷದ ಸಂಸದರೊಬ್ಬರು ಮುಂದಿನ ಚುನಾವಣೆಗೆ ಮುಂಚಿತವಾಗಿ ಪಕ್ಷದ ನಾಯಕನ ಸ್ಥಾನಕ್ಕೆ ಪ್ರಧಾನಿ ಜಸ್ಟಿನ್ ಟ್ರುಡೊ ರಾಜೀನಾಮೆ ನೀಡಬೇಕು ಎಂದು ಕರೆ ನೀಡಿದ್ದಾರೆ. ದೇಶದ ಜನರು ನಿಮ್ಮಿಂದ ಸಾಕಷ್ಟು ಅನುಭವಿಸಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಟ್ರುಡೊ ಹೊರ ಹೋಗುವ ಸಮಯವಾಗಿದೆ ಎಂಬ ಸಂದೇಶವನ್ನು ನಾನು ಬಹಳ ಬಲವಾಗಿ ಮತ್ತು ಸ್ಪಷ್ಟವಾಗಿ ಕೇಳುತ್ತಿದ್ದೇನೆ. ಅದಕ್ಕೆ ನನ್ನ ಸಮ್ಮತವೂ ಇದೆ ಎಂದು ಸಂಸತ್ ಸದಸ್ಯ ಸೀನ್ ಕೇಸೆಯ್ ಉಲ್ಲೇಖಿಸಿದ್ದಾರೆ ಎಂದು ಕೆನಡಾ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್ ವರದಿ ಮಾಡಿದೆ.
'ಜನರು ನಿಮ್ಮಿಂದ ಸಾಕಷ್ಟು ನುಭವಿಸಿದ್ದಾರೆ. ನೀವು ಹೊರ ಹೋಗಬೇಕೆಂದು ಅವರು ಬಯಸುತ್ತಾರೆ'ಎಂದು ಸಂಸದರು ಹೇಳಿದ್ದಾರೆ.
ಟ್ರುಡೊ ಅವರ ನಾಯಕತ್ವದ ಮೇಲೆ ಲಿಬರಲ್ ಪಕ್ಷದ ಸಭೆಯಲ್ಲಿ ದೊಡ್ಡ ಮಟ್ಟದ ಆತಂಕ ಇರುವುದನ್ನು ಅವರು ಒತ್ತಿ ಹೇಳಿದ್ದಾರೆ.
ಟೊರೆಂಟೊ-ಸೆಂಟ್, ಪೌಲ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಪಕ್ಷಕ್ಕೆ ಆದ ಸೋಲಿನ ಬಳಿಕ ಲಿಬರಲ್ ಪಕ್ಷದ ಮುಂದಿನ ಹಾದಿ ಬಗ್ಗೆ ನಿರ್ಧರಿಸಲು ನಡೆದ ಪಕ್ಷದ ಸಂಸದರ ಸಾಲು ಸಾಲು ಸಭೆಗಳ ಬೆನ್ನಲ್ಲೇ ಸಂಸದರ ಈ ಹೇಳಿಕೆ ಹೊರಬಿದ್ದಿದೆ.